ಕೋಳಿ ಸಾಕಾಣಿಕೆ ರೈತರ ಬೇಡಿಕೆ ಈಡೇರಿಸಿ: ಸರ್ಕಾರಕ್ಕೆ ಒಕ್ಕೂಟ ಒತ್ತಾಯ

ಮಂಗಳೂರು:ಕೋಳಿ ಬೆಳೆಗಾರರಿಗೆ ಪ್ರತಿ ಕೆ.ಜಿ.ಗೆ ಕನಿಷ್ಠ ₹10 ನೀಡುವಂತೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ಖಾಸಗಿ ಇಂಟಿಗ್ರೇಶನ್ ಕಂಪನಿಗಳು ಜಾರಿಗೊಳಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕೋಳಿ ಬೆಳೆಗಾರರ ಅಭಿವೃದ್ಧಿ ಒಕ್ಕೂಟ ಆಗ್ರಹಿಸಿದೆ.

ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಪ್ರಭಾಕರ ಎಸ್. ಸುವರ್ಣ, ರಾಜ್ಯದಲ್ಲಿ ಸುಮಾರು 25 ಸಾವಿರ ರೈತರು ಒಪ್ಪಂದ ಪದ್ಧತಿಯಲ್ಲಿ ಕೋಳಿ ಸಾಕಾಣಿಕೆ ಮಾಡುತ್ತಿದ್ದಾರೆ. ಆದರೆ ಕಂಪನಿಗಳ ಏಕಸ್ವಾಮ್ಯದಿಂದ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಹೇಳಿದರು.

ಸರ್ಕಾರದ ಆದೇಶ ಜಾರಿಯಾಗದ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಆಗಸ್ಟ್ 29ರಂದು ಬೆಂಗಳೂರಿನಲ್ಲಿ ಬೃಹತ್ ಹಕ್ಕೊತ್ತಾಯ ಸಭೆ ಆಯೋಜಿಸಲಾಗಿದೆ. ದಕ್ಷಿಣ ಕನ್ನಡದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಕೋಳಿ ಸಾಕಾಣಿಕೆಯನ್ನು ಕೃಷಿ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಉಚಿತ ವಿದ್ಯುತ್, ಶೇ.3ರ ಬಡ್ಡಿದರದಲ್ಲಿ ₹25 ಲಕ್ಷದವರೆಗೆ ಸಾಲ, ಯಂತ್ರೋಪಕರಣಗಳಿಗೆ ಸಬ್ಸಿಡಿ, ಕೋಳಿ ಮನೆಗಳಿಗೆ ವಿಮೆ ಹಾಗೂ ಗುಣಮಟ್ಟದ ಕೋಳಿಮರಿ ಮತ್ತು ಆಹಾರ ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರವೀಣ್ ಕುಮಾರ್ ಕೆಡಂಜಿಗುತ್ತು, ದಿನೇಶ್ ಶೆಟ್ಟಿ ಕೋಡಿಂಬಾಡಿ, ಸನತ್ ಮುಳುಗಾಡು ಹಾಗೂ ಗಣೇಶ್ ಎಚ್. ನೆಲ್ಯಾಡಿ ಉಪಸ್ಥಿತರಿದ್ದರು.

SHARE
Loading spinner

One thought on “ಕೋಳಿ ಸಾಕಾಣಿಕೆ ರೈತರ ಬೇಡಿಕೆ ಈಡೇರಿಸಿ: ಸರ್ಕಾರಕ್ಕೆ ಒಕ್ಕೂಟ ಒತ್ತಾಯ

Leave a Reply

Your email address will not be published. Required fields are marked *

error: Content is protected !!