ಮಂಗಳೂರು: ಗ್ರಾಮೀಣ ಪ್ರದೇಶದ ಆಸ್ತಿ ಮಾಲೀಕರು, ರೈತರು ಹಾಗೂ ಬಡ ಕುಟುಂಬಗಳಿಗೆ ಇ-ಸ್ವತ್ತು 2.0 ತಂತ್ರಾಂಶದಿಂದ ತೀವ್ರ ಸಮಸ್ಯೆಯಾಗುತ್ತಿದ್ದು, ಸರ್ಕಾರ ತಕ್ಷಣ ತಂತ್ರಾಂಶದ ಲೋಪದೋಷಗಳನ್ನು ಸರಿಪಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಆಗ್ರಹಿಸಿದ್ದಾರೆ.
ಮನಪಾ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಜಿಟಲೀಕರಣ ಹಾಗೂ ಆಡಳಿತ ಸುಧಾರಣೆಯ ಹೆಸರಿನಲ್ಲಿ ಜಾರಿಗೊಳಿಸಿರುವ ಇ-ಸ್ವತ್ತು 2.0 ವ್ಯವಸ್ಥೆಯು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಬದಲು ಕಚೇರಿಗಳ ಅಲೆದಾಟ, ವಿಳಂಬ ಹಾಗೂ ಮಾನಸಿಕ ಕಿರುಕುಳಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.

ಸರ್ಕಾರವೇ ವಿಧಾನ ಪರಿಷತ್ತಿನಲ್ಲಿ ನೀಡಿರುವ ಮಾಹಿತಿಯಂತೆ, ಡಿಸೆಂಬರ್ 1, 2025ರ ಬಳಿಕ ಇ-ಸ್ವತ್ತು 2.0 ಜಾರಿಯಾದ ನಂತರ ಸಲ್ಲಿಕೆಯಾದ 1,84,227 ಅರ್ಜಿಗಳ ಪೈಕಿ 23,802 ಅರ್ಜಿಗಳು ಇನ್ನೂ ವಿಲೇವಾರಿಗೆ ಬಾಕಿಯಿದ್ದು, 6,290 ಅರ್ಜಿಗಳು ತಿರಸ್ಕೃತಗೊಂಡಿವೆ. 11ಬಿ ಅರ್ಜಿಗಳಲ್ಲಿಯೂ ಸಾವಿರಾರು ಅರ್ಜಿಗಳು ಅನುಮೋದನೆಗೆ ಬಾಕಿ ಉಳಿದಿವೆ ಎಂದು ತಿಳಿಸಿದರು.

ಹಿಂದೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಿಡಿಒಗಳಿಗೆ ಇದ್ದ ಅಧಿಕಾರವನ್ನು ಇ-ಸ್ವತ್ತು 2.0 ಮೂಲಕ ಇಒ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಮಟ್ಟಕ್ಕೆ ವರ್ಗಾಯಿಸಿರುವುದರಿಂದ ಗ್ರಾಮೀಣ ಜನರು ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ 94 ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿದ ವೇಳೆ ಮನೆ ನಿರ್ಮಾಣಕ್ಕೆ ಅಗತ್ಯವಿರುವ ದಾಖಲೆ ಹಾಗೂ ಅನುಮತಿ ಪಡೆಯುವುದು ಸಾರ್ವಜನಿಕರಿಗೆ ದೊಡ್ಡ ಸಮಸ್ಯೆಯಾಗಿದೆ ಎಂಬುದು ಗಮನಕ್ಕೆ ಬಂದಿದೆ ಎಂದರು.

ತಂತ್ರಾಂಶದಲ್ಲಿನ ಸರ್ವರ್ ಸಮಸ್ಯೆಗಳನ್ನು ಸರಿಪಡಿಸುವ ಜತೆಗೆ 11ಎ ಮತ್ತು 11ಬಿ ಅರ್ಜಿಗಳ ವಿಲೇವಾರಿ ಪ್ರಕ್ರಿಯೆಯನ್ನು ಸರಳೀಕರಿಸಬೇಕು. ನಿಗದಿತ ಅವಧಿಯಲ್ಲಿ ಅರ್ಜಿಗಳ ವಿಲೇವಾರಿ ಆಗದಿದ್ದರೆ ಸ್ವಯಂಚಾಲಿತ ವ್ಯವಸ್ಥೆ ಮೂಲಕ ಸಮಸ್ಯೆ ಪರಿಹರಿಸುವ ಕ್ರಮ ಕೈಗೊಳ್ಳಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.
ಮನೆ ನಿರ್ಮಾಣದ ಅನುಮತಿ ಹಾಗೂ ಕಟ್ಟಡ ಪರವಾನಿಗೆ ಪ್ರಕ್ರಿಯೆಯಲ್ಲಿ ವಿಳಂಬ ಮತ್ತು ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿದ್ದು, ಬಡ ಜನರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಈ ವಿಚಾರವನ್ನು ರಾಜಕೀಯವಾಗಿ ಪರಿಗಣಿಸದೆ ಸಾರ್ವಜನಿಕರ ಸಮಸ್ಯೆ ಪರಿಹಾರಕ್ಕೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಕಿಶೋರ್ ಕುಮಾರ್ ಪುತ್ತೂರು ಆಗ್ರಹಿಸಿದರು.

