ಮಂಗಳೂರು: ರಾಜ್ಯದಲ್ಲಿ ‘ಲಂಚ ಗ್ಯಾರಂಟಿ’ ಸರ್ಕಾರದ ಆಡಳಿತ ನಡೆಯುತ್ತಿದ್ದು, ಸಚಿವರಿಗೆ ಕಮಿಷನ್ ನೀಡಲು ಅಧಿಕಾರಿಗಳು ಲಂಚ ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಶಾಸಕ ಭರತ್ ಶೆಟ್ಟಿ ವ್ಯಂಗ್ಯವಾಡಿದರು.
ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಸಚಿವರು ಭ್ರಷ್ಟಾಚಾರದಲ್ಲಿ ಶಾಮೀಲಾಗಿದ್ದಾರೆ ಎಂಬ ಆರೋಪಗಳನ್ನು ಆಡಳಿತ ಪಕ್ಷದ ಶಾಸಕರೇ ಮಾಡುತ್ತಿರುವುದು ಗಮನಾರ್ಹ ಬೆಳವಣಿಗೆಯಾಗಿದೆ ಎಂದರು.

ರಾಜ್ಯ ಸಚಿವ ಸಂಪುಟದಲ್ಲಿ ‘ಪೇಮೆಂಟ್ ಕೋಟಾ’ದಡಿ ಸಚಿವರಾಗಿರುವವರು ಅಧಿಕಾರಿಗಳ ಮೂಲಕ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ಇತ್ತೀಚಿನ ವಿದ್ಯಮಾನಗಳು ಇದಕ್ಕೆ ಸಾಕ್ಷಿಯಾಗಿವೆ ಎಂದು ಅವರು ಆರೋಪಿಸಿದರು.

ರಾಜ್ಯದಲ್ಲಿ ಭ್ರಷ್ಟಾಚಾರ ಯಾವ ಮಟ್ಟಿಗೆ ವ್ಯಾಪಿಸಿದೆ ಎಂಬುದಕ್ಕೆ ಲೋಕಾಯುಕ್ತ ಎನ್.ಬಿ. ವೀರಪ್ಪ ಅವರು ಕರ್ನಾಟಕದಲ್ಲಿ 100 ಮಂದಿಯಲ್ಲಿ 63 ಮಂದಿ ಲಂಚ ನೀಡಬೇಕಾದ ಪರಿಸ್ಥಿತಿ ಇದೆ ಎಂದು ಹೇಳಿರುವುದು ಸಾಕ್ಷಿಯಾಗಿದೆ. ಜನಸಾಮಾನ್ಯರು ಸರ್ಕಾರಿ ಕೆಲಸಗಳನ್ನು ಮಾಡಿಸಿಕೊಳ್ಳಲು ಲಂಚ ನೀಡಬೇಕಾದ ಸ್ಥಿತಿ ನಿರ್ಮಾಣವಾಗಿರುವುದು ಸರ್ಕಾರದ ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಭರತ್ ಶೆಟ್ಟಿ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಬಿಜೆಪಿ ಪ್ರಮುಖರಾದ ಸಂದೀಪ್ ಪಚ್ಚನಾಡಿ, ಗುರುಚರಣ್ ಹಾಗೂ ಮಾಧ್ಯಮ ಸಂಚಾಲಕ ಅರುಣ್ ಶೇಟ್ ಉಪಸ್ಥಿತರಿದ್ದರು.

