ಮಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ನಡೆದಿದೆ ಎನ್ನಲಾದ ಅವಮಾನಕರ ‘ಶುದ್ಧೀಕರಣ’ ಕೃತ್ಯವನ್ನು ಖಂಡಿಸಿ ಧ್ವನಿ ಎತ್ತಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಎಫ್ಐಆರ್ ದಾಖಲಿಸಿರುವ ಬಿಜೆಪಿ ಸರ್ಕಾರದ ಕ್ರಮ ಖಂಡನೀಯ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಹೇಳಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರು ದೇಶದ ಹಿರಿಯ ರಾಜಕಾರಣಿ ಹಾಗೂ ಶೋಷಿತ ಸಮುದಾಯದ ಪ್ರಮುಖ ನಾಯಕರಾಗಿದ್ದು, ಅವರಿಗೆ ‘ಶುದ್ಧೀಕರಣ’ದ ಹೆಸರಿನಲ್ಲಿ ಅಪಮಾನ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ಅಮಾನವೀಯ ಘಟನೆಯನ್ನು ಖಂಡಿಸಿ ನ್ಯಾಯಕ್ಕಾಗಿ ಧ್ವನಿ ಎತ್ತಿದ್ದೇ ರಾಹುಲ್ ಗಾಂಧಿ ಮಾಡಿದ ತಪ್ಪೇ ಎಂದು ಪ್ರಶ್ನಿಸಿದ್ದಾರೆ.
ಅವಮಾನಕರ ಕೃತ್ಯ ಎಸಗಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬದಲು, ಶೋಷಿತ ಸಮುದಾಯದ ಪರವಾಗಿ ನಿಂತು ಸರ್ಕಾರದ ವೈಫಲ್ಯವನ್ನು ಪ್ರಶ್ನಿಸಿದ ರಾಹುಲ್ ಗಾಂಧಿ ಅವರ ವಿರುದ್ಧವೇ ದುರುದ್ದೇಶಪೂರಿತವಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ಪದ್ಮರಾಜ್ ಪೂಜಾರಿ ಆರೋಪಿಸಿದ್ದಾರೆ.

ಸಾಂವಿಧಾನಿಕ ಸ್ಥಾನದಲ್ಲಿರುವ ವಿರೋಧ ಪಕ್ಷದ ನಾಯಕನ ಧ್ವನಿಯನ್ನು ಅಡಗಿಸಲು ಬಿಜೆಪಿ ಸರ್ಕಾರ ಅಧಿಕಾರ ಹಾಗೂ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ಸುಳ್ಳು ಪ್ರಕರಣಗಳು ಹಾಗೂ ಬೆದರಿಕೆಗಳಿಗೆ ಕಾಂಗ್ರೆಸ್ ಪಕ್ಷವಾಗಲಿ, ರಾಹುಲ್ ಗಾಂಧಿ ಅವರಾಗಲಿ ಮಣಿಯುವುದಿಲ್ಲ. ದಲಿತರು ಹಾಗೂ ಸಾಮಾಜಿಕ ನ್ಯಾಯದ ಪರವಾದ ಹೋರಾಟವನ್ನು ಸಂಸತ್ತಿನಿಂದ ಹಿಡಿದು ಬೀದಿಮಟ್ಟದವರೆಗೆ ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಪದ್ಮರಾಜ್ ಆರ್. ಪೂಜಾರಿ ತಿಳಿಸಿದ್ದಾರೆ.


Finally found a site that doesnt lag during peak hours. The login is quick and everything just works perfectly. sanur999login