ಮಂಗಳೂರಿನಲ್ಲಿ ಸೆ.20ರಂದು ‘ಸ್ಟ್ರೆಂಥಾನ್’ ಫಿಟ್ನೆಸ್ ಸ್ಪರ್ಧೆ; 300 ಕ್ರೀಡಾಪಟುಗಳ ಭಾಗಿ

ಮಂಗಳೂರು: ಓಟ, ಶಕ್ತಿ ಹಾಗೂ ಕ್ರಿಯಾತ್ಮಕ ಫಿಟ್ನೆಸ್‌ನ್ನು ಒಂದೇ ಸ್ಪರ್ಧಾತ್ಮಕ ವೇದಿಕೆಯಲ್ಲಿ ಒಗ್ಗೂಡಿಸುವ ಉದ್ದೇಶದ ‘ಸ್ಟ್ರೆಂಥಾನ್’ (STRENGTHON) ಫಿಟ್ನೆಸ್-ಪರ್ಫಾರ್ಮೆನ್ಸ್ ಸ್ಪರ್ಧೆಯ ಮೊದಲ ಆವೃತ್ತಿ ಸೆ.20ರಂದು ಮಂಗಳೂರಿನ ಉರ್ವದ ಐಕ್ಯ ಸ್ಪೋರ್ಟ್ಸ್ ಫೆಸಿಲಿಟಿಯಲ್ಲಿ ನಡೆಯಲಿದೆ ಎಂದು ಸ್ಟ್ರೆಂಥಾನ್ ಮುಖ್ಯಸ್ಥ ನಿತಿನ್ ಶ್ರಿಯಾನ್ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಕ್ರೀಡೆಗಳಿಗೆ ಸೀಮಿತವಾಗಿರುವ ಫಿಟ್ನೆಸ್‌ಗಿಂತ ಸಮಗ್ರ ದೈಹಿಕ ಸಾಮರ್ಥ್ಯಕ್ಕೆ ಒತ್ತು ನೀಡುವುದು ‘ಸ್ಟ್ರೆಂಥಾನ್’ ಉದ್ದೇಶವಾಗಿದೆ. ಓಟದೊಂದಿಗೆ ವಿವಿಧ ರೀತಿಯ ಕ್ರಿಯಾತ್ಮಕ ವ್ಯಾಯಾಮಗಳನ್ನು ಒಳಗೊಂಡ ಸ್ಪರ್ಧೆ ಇದಾಗಿದ್ದು, ಪ್ರತಿ ವಿಭಾಗದಲ್ಲೂ ಅಂತಾರಾಷ್ಟ್ರೀಯ ಮಾನದಂಡದಂತೆ ತೀರ್ಪುಗಾರರು ಸ್ಪರ್ಧಿಗಳ ಪ್ರದರ್ಶನವನ್ನು ಪರಿಶೀಲಿಸಲಿದ್ದಾರೆ ಎಂದರು.

ಸ್ಪರ್ಧೆಯಲ್ಲಿ 200 ಮೀಟರ್ ಓಟದ ಬಳಿಕ ವಿವಿಧ ರೀತಿಯ ವರ್ಕೌಟ್‌ಗಳನ್ನು ನಡೆಸಲಾಗುತ್ತದೆ. ಬಳಿಕ ಮತ್ತೆ ಓಟ ಮತ್ತು ವ್ಯಾಯಾಮದ ಹಂತಗಳು ಮುಂದುವರಿಯಲಿದ್ದು, ಸ್ಪರ್ಧಿಗಳ ಸಾಮರ್ಥ್ಯ, ತಂತ್ರ ಹಾಗೂ ಪ್ರದರ್ಶನವನ್ನು ಆಧರಿಸಿ ಮೌಲ್ಯಮಾಪನ ಮಾಡಲಾಗುವುದು. ಸ್ಪರ್ಧೆಯ ವೇಳೆ ಅಗತ್ಯ ಸುರಕ್ಷತಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಮೊದಲ ಬಾರಿಗೆ ನಡೆಯುತ್ತಿರುವ ಈ ಸ್ಪರ್ಧೆಯಲ್ಲಿ ನೋಂದಾಯಿಸಿಕೊಂಡ 300 ಕ್ರೀಡಾಪಟುಗಳನ್ನು ‘ಫೌಂಡಿಂಗ್ ಅಥ್ಲೀಟ್ಸ್’ ಎಂದು ಗುರುತಿಸಲಾಗುವುದು. ಅವರಿಗೆ ಗುಣಮಟ್ಟದ ಟೀ-ಶರ್ಟ್, ಪದಕ ಹಾಗೂ ಪ್ರಮಾಣಪತ್ರ ನೀಡಲಾಗುವುದು. ದೈಹಿಕ ಸಾಮರ್ಥ್ಯವನ್ನು ಕೇವಲ ಒಂದು ಕ್ರೀಡೆಗೆ ಸೀಮಿತಗೊಳಿಸದೆ, ಆರೋಗ್ಯಕರ ಜೀವನಶೈಲಿಯ ಭಾಗವಾಗಿಸುವ ಸಂದೇಶವನ್ನು ‘ಸ್ಟ್ರೆಂಥಾನ್’ ಮೂಲಕ ನೀಡಲಾಗುತ್ತಿದೆ ಎಂದು ನಿತಿನ್ ಶ್ರಿಯಾನ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸ್ಟ್ರೆಂಥಾನ್ ಫೌಂಡಿಂಗ್ ಎಡಿಷನ್ ಇದರ ಪ್ರಮುಖರಾದ ಡಾ ಪ್ರಜ್ವಲ್ , ಲಿಖಿತ , ನಿತಿನ್ , ಚಂದ್ರಶೇಖರ್ , ಜಯರಾಜ್ ಸಹಿತ ಮತ್ತಿತರರು ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!