ಮಂಗಳೂರು: ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಿ ಕರಾವಳಿಯನ್ನು ಪ್ರಮುಖ ಪ್ರವಾಸೋದ್ಯಮ ಕೇಂದ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಸಚಿವ ಕೆ.ಜೆ. ಜಾರ್ಜ್ ನೇತೃತ್ವದಲ್ಲಿ ಪ್ರವಾಸಿ ತಾಣಗಳ ಪರಿಶೀಲನೆ ಹಾಗೂ ಉದ್ಯಮಿಗಳೊಂದಿಗೆ ಸಭೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ನೈಟ್ ಲೈಫ್ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯ ನಿಕಟಪೂರ್ವ ಅಧ್ಯಕ್ಷರಾದ ಕೆ.ಹರೀಶ್ ಕುಮಾರ್ ತಿಳಿಸಿದರು .

ಅವರು ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಜಿಲ್ಲೆಯಲ್ಲಿ ಸದ್ಯ ಶಾಂತಿಯುತ ವಾತಾವರಣವಿದ್ದು, ಕಳೆದ ಎರಡು ವರ್ಷಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಗಲಭೆ ಸೃಷ್ಟಿಸುವವರು ಹಾಗೂ ಅದನ್ನು ಪ್ರೋತ್ಸಾಹಿಸುವವರು ಇಂತಹ ಘಟನೆಗಳಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಅರಿತುಕೊಂಡಿದ್ದಾರೆ ಎಂದರು.

ಬಿಜೆಪಿಯಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ ಎಂದು ಆರೋಪಿಸಿದ ಅವರು, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಉದಾಹರಣೆ ಉಲ್ಲೇಖಿಸಿ, ತನಿಖಾ ಸಂಸ್ಥೆಗಳ ಕ್ರಮಗಳ ಬಳಿಕ ಅವರು ಬಿಜೆಪಿಗೆ ಸೇರಿದ ನಂತರ ರಾಜಕೀಯ ಪರಿಸ್ಥಿತಿ ಬದಲಾಗಿದೆ ಎಂದು ಟೀಕಿಸಿದರು. ಇದೇ ರೀತಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧವೂ ತನಿಖಾ ಸಂಸ್ಥೆಗಳ ಕ್ರಮ ನಡೆದಿತ್ತು ಎಂದು ಹೇಳಿದ ಅವರು, ಇಂತಹ ಹಲವು ಘಟನೆಗಳು ದೇಶದಲ್ಲಿ ನಡೆದಿವೆ ಎಂದು ಆರೋಪಿಸಿದರು.

ಅಧಿಕಾರಕ್ಕಾಗಿ ಕೇಂದ್ರದ ಬಿಜೆಪಿ ಸರ್ಕಾರ ಯಾವುದೇ ಹಂತಕ್ಕೂ ಇಳಿಯುತ್ತಿದೆ ಎಂದು ಆರೋಪಿಸಿದ ಹರೀಶ್ ಕುಮಾರ್, ಇಂತಹ ಬೆಳವಣಿಗೆಗಳು ಪ್ರಜಾಪ್ರಭುತ್ವದ ಮೇಲೆ ಪರಿಣಾಮ ಬೀರುತ್ತವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮನೋರಾಜ್ ರಾಜೀವ, ಸದಾಶಿವ ಉಳ್ಳಾಲ್, ಇಬ್ರಾಹಿಂ ನವಾಜ್, ಸುಹಾನ್ ಆಳ್ವಾ, ಮಲಾರ್ ಮೋನು, ಎಸ್ ಅಪ್ಪಿ, ಶುಭೋದಯ ಆಳ್ವಾ, ವಿಕಾಶ್ ಶೆಟ್ಟಿ, ಸಾರಿಕಾ ಪೂಜಾರಿ, ನೀತು ಡಿ ಸೌಝ, ಯೋಗೀಶ್ ಕುಮಾರ್, ಪದ್ಮನಾಬ ರೈವರು – ಕೆ ಹರೀಶ್ ಕುಮಾರ್ ರವರ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು

