ಮಂಗಳೂರಿನ ಮಾಜಿ ಮೇಯರ್ ಕೆ. ಅಶ್ರಫ್ ಅವರು ಸಚಿವ ಹಾಗೂ ಸಮುದಾಯದ ನಾಯಕ ಬಿ. ಝಡ್. ಜಮೀರ್ ಅಹ್ಮದ್ ಖಾನ್ ಅವರ ವಿರುದ್ಧ ನೀಡಿರುವ ಹೇಳಿಕೆಯನ್ನು ಕೂಡಲೇ ಹಿಂಪಡೆಯಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಜನಪ್ರಧಿನಿಧಿಗಳ ಒಕ್ಕೂಟದ ಅಧ್ಯಕ್ಷ ಹಾಗೂ ಅಹಿಂದ ಚಳುವಳಿಯ ಜಿಲ್ಲಾ ಮುಖ್ಯ ಸಂಚಾಲಕ ಸಿರಾಜ್ ಬಜ್ಪೆ ಮನವಿ ಮಾಡಿದ್ದಾರೆ .

ಹಜ್ ಭವನದ ಕಾರ್ಯಕ್ರಮದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಹಜ್ ಭವನ ನಿರ್ಮಾಣಕ್ಕಾಗಿ ಜಾಗವನ್ನು ದಾನ ಮಾಡಿದ ಇನಾಯತ್ ಅಲಿ ಅವರ ಕೊಡುಗೆಯನ್ನು ಪ್ರಶಂಸಿಸಿದ್ದಾರೆ. “ಈ ಜಿಲ್ಲೆಯಲ್ಲಿ ಸಾಕಷ್ಟು ಸ್ಥಿತಿವಂತರು ಇದ್ದಾರೆ; ಆದರೆ ಇಂತಹ ಮಹತ್ವದ ಕಾರ್ಯಕ್ಕೆ ಜಾಗ ನೀಡಲು ದೊಡ್ಡ ಹೃದಯ ಬೇಕು” ಎಂಬ ಅರ್ಥದಲ್ಲಿ ಅವರು ಮಾತನಾಡಿದ್ದಾರೆ. ಇದನ್ನು ತಿರುಚಿ ರಾಜಕೀಯ ವಿವಾದವನ್ನಾಗಿ ಮಾಡುವುದು ಸರಿಯಲ್ಲ.

ಇನಾಯತ್ ಅಲಿ ಅವರು ಜಾಗ ದಾನ ಮಾಡಿರುವುದನ್ನು ಪ್ರಶಂಸಿಸುವುದು ತಪ್ಪೇ?
ಹಜ್ ಭವನಕ್ಕಾಗಿ ಜಾಗ ನೀಡಿದವರನ್ನು ಗೌರವಿಸುವುದು ಅಪರಾಧವೇ? ಅಥವಾ ಅವರ ಕೊಡುಗೆಯನ್ನು ಗುರುತಿಸಿದ ಸಚಿವರನ್ನು ಪ್ರಶ್ನಿಸುವುದೇ ರಾಜಕೀಯ?

ಈ ಜಿಲ್ಲೆಯಲ್ಲಿ ಅನೇಕ ಸ್ಥಿತಿವಂತರು ಸಮಾಜಕ್ಕೆ ವಿವಿಧ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ಅದನ್ನು ಯಾರೂ ನಿರಾಕರಿಸುವುದಿಲ್ಲ. ಆದರೆ ಹಜ್ ಭವನದಂತಹ ಮಹತ್ವದ ಯೋಜನೆಗಾಗಿ ಇನಾಯತ್ ಅಲಿ ಅವರು ತಮ್ಮ ಜಾಗವನ್ನು ದಾನ ಮಾಡಿರುವುದನ್ನು ಪ್ರಶಂಸಿಸುವುದರಲ್ಲಿ ಯಾವುದೇ ತಪ್ಪಿಲ್ಲ.
ಇನ್ನೊಂದೆಡೆ, ಹಜ್ ಭವನ ನಿರ್ಮಾಣಕ್ಕೆ ಸರ್ಕಾರದ ಮಟ್ಟದಲ್ಲಿ ₹20 ಕೋಟಿ ಅನುದಾನ ಒದಗಿಸಲು ಸಚಿವ ಜಮೀರ್ ಅಹ್ಮದ್ ಖಾನ್ ಅವರು ಪ್ರಯತ್ನಿಸಿರುವುದನ್ನೂ ಗುರುತಿಸಬೇಕಾಗಿದೆ. ಜಾಗ ದಾನ ಮಾಡಿದವರ ಸೇವೆಯೂ ಗೌರವಕ್ಕೆ ಅರ್ಹ, ಯೋಜನೆಗೆ ಸರ್ಕಾರದ ಅನುದಾನ ತರುವ ಪ್ರಯತ್ನವೂ ಗೌರವಕ್ಕೆ ಅರ್ಹ.
ಆದ್ದರಿಂದ ಈ ವಿಚಾರದಲ್ಲಿ ಅನಗತ್ಯ ರಾಜಕೀಯ ಮಾಡುವುದನ್ನು ಮಾಜಿ ಮೇಯರ್ ಕೆ. ಅಶ್ರಫ್ ಅವರು ನಿಲ್ಲಿಸಬೇಕು. ಸಮುದಾಯದ ಮಹತ್ವದ ಯೋಜನೆಯನ್ನು ರಾಜಕೀಯ ಭಿನ್ನಾಭಿಪ್ರಾಯಗಳ ವೇದಿಕೆಯನ್ನಾಗಿ ಮಾಡಬಾರದು.

ಯಾರಾದರೂ ತಪ್ಪು ಮಾಡಿದ್ದರೆ ಪ್ರಶ್ನಿಸಿ; ಆದರೆ ಒಳ್ಳೆಯ ಕಾರ್ಯವನ್ನು ಒಳ್ಳೆಯ ಕಾರ್ಯವೆಂದು ಗುರುತಿಸುವ ಮನಸ್ಸು ಇರಲಿ. ಹಜ್ ಭವನದಂತಹ ಸಮುದಾಯದ ಕನಸಿನ ಯೋಜನೆಯಲ್ಲಿ ವೈಯಕ್ತಿಕ ಅಥವಾ ರಾಜಕೀಯ ಲೆಕ್ಕಾಚಾರಕ್ಕಿಂತ ಸಮುದಾಯದ ಹಿತವೇ ಮುಖ್ಯ.
ಆದ್ದರಿಂದ ಕೆ. ಅಶ್ರಫ್ ಅವರು ತಮ್ಮ ಹೇಳಿಕೆಯನ್ನು ಕೂಡಲೇ ಹಿಂಪಡೆದು, ಈ ವಿಚಾರಕ್ಕೆ ತೆರೆ ಎಳೆಯಬೇಕು ಎಂದು ನಾನು ಆಗ್ರಹಿಸುತ್ತೇನೆ.

