ಮಂಗಳೂರು: ತುಳು ಭಾಷೆಗೆ ಕರ್ನಾಟಕದ ಹೆಚ್ಚುವರಿ ಆಡಳಿತ ಭಾಷೆಯಾಗಿ ಮಾನ್ಯತೆ ನೀಡಿರುವುದು ತುಳುನಾಡಿನ ಇತಿಹಾಸದಲ್ಲಿ ಮಹತ್ವದ ಹಾಗೂ ಐತಿಹಾಸಿಕ ಬೆಳವಣಿಗೆಯಾಗಿದೆ. ಈ ನಿರ್ಧಾರಕ್ಕಾಗಿ ಸಮಸ್ತ ತುಳುವರ ಪರವಾಗಿ ಕರ್ನಾಟಕ ಸರ್ಕಾರ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಹೇಳಿದರು.

ತುಳು ಸುಮಾರು ಎರಡೂವರೆ ಸಾವಿರ ವರ್ಷಗಳ ಹಿಂದೆಯೇ ದ್ರಾವಿಡ ಭಾಷಾ ವಲಯದಿಂದ ಸ್ವತಂತ್ರವಾಗಿ ಬೆಳವಣಿಗೆ ಹೊಂದಿದ ಸಮೃದ್ಧ ಭಾಷೆಯಾಗಿದೆ. 1856ರಲ್ಲಿ ಭಾಷಾ ವಿಜ್ಞಾನಿ ರಾಬರ್ಟ್ ಕಾಲ್ಡ್‌ವೆಲ್ ಅವರು ತುಳುವಿನ ವೈಶಿಷ್ಟ್ಯವನ್ನು ಗುರುತಿಸಿದ್ದರು. ಇಷ್ಟೊಂದು ಪ್ರಾಚೀನ ಇತಿಹಾಸ ಹೊಂದಿದ್ದರೂ ತುಳುವಿಗೆ ಈವರೆಗೆ ಅಧಿಕೃತ ಆಡಳಿತ ಮಾನ್ಯತೆ ದೊರೆತಿರಲಿಲ್ಲ. ಪೂರ್ವಜರು, ಹಿರಿಯರು ತುಳುವನ್ನು ಮೌಖಿಕ ಪರಂಪರೆ, ಪಾಡ್ದನ, ಬೈಲ, ಕವಿತೆ, ದೈವದ ನುಡಿಗಳು ಹಾಗೂ ಜನಬಳಕೆಯ ಮೂಲಕ ತಲೆತಲಾಂತರಗಳಿಂದ ಉಳಿಸಿಕೊಂಡು ಬಂದಿದ್ದಾರೆ ಎಂದು ಅವರು ತಿಳಿಸಿದರು.

ತುಳುನಾಡಿನ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಭಾಗಗಳಲ್ಲಿ ತುಳು ಪ್ರಮುಖ ಸಂಪರ್ಕ ಭಾಷೆಯಾಗಿ ಬೆಳೆದಿದೆ. ತುಳು ಮಾತೃಭಾಷಿಕರ ಜೊತೆಗೆ ಬ್ಯಾರಿ, ಕೊಂಕಣಿ, ಮರಾಠಿ, ಕೊರಗ ಸೇರಿದಂತೆ ವಿವಿಧ ಭಾಷಾ ಸಮುದಾಯಗಳ ಜನರೂ ಜನಸಂಪರ್ಕದ ಭಾಷೆಯಾಗಿ ತುಳುವನ್ನು ಬಳಸಿಕೊಂಡು ಬಂದಿದ್ದಾರೆ. ವಿವಿಧ ಧರ್ಮ ಹಾಗೂ ಸಮುದಾಯಗಳ ಜನರ ಕೊಡುಗೆಯಿಂದ ತುಳು ಆಳವಾಗಿ ಬೇರೂರಿ, ಜನಬಳಕೆಯ ಭಾಷೆಯಾಗಿ ಉಳಿದುಕೊಂಡಿದೆ ಎಂದರು.
ತುಳು ಭಾಷೆಗೆ ಮಾನ್ಯತೆ ನೀಡಬೇಕೆಂಬ ಬೇಡಿಕೆ ಹಲವು ದಶಕಗಳಿಂದ ನಿರಂತರವಾಗಿ ನಡೆಯುತ್ತಾ ಬಂದಿದೆ. 1928ರಲ್ಲಿ ಶ್ರೀನಿವಾಸ ಉಪಾಧ್ಯ ಪಣಿಯಾಡಿ ಅವರ ನೇತೃತ್ವದಲ್ಲಿ ‘ತುಳು ಮಹಾಸಭೆ’ ಸ್ಥಾಪನೆಯಾಗಿದ್ದು, ತುಳುವಿಗೆ ಮಾನ್ಯತೆ ಹಾಗೂ ತುಳುನಾಡಿನ ಹಕ್ಕುಗಳ ಕುರಿತು ಧ್ವನಿ ಎತ್ತಲಾಗಿತ್ತು. ಬಳಿಕ 1970ರ ದಶಕದಿಂದ ಮಂಗಳೂರಿನಲ್ಲಿ ತುಳುಕೂಟ ಹಾಗೂ ವಿವಿಧ ತುಳು ಸಮ್ಮೇಳನಗಳ ಮೂಲಕ ಈ ಬೇಡಿಕೆ ಮತ್ತಷ್ಟು ವ್ಯಾಪಕವಾಯಿತು. ಮರಿಯಪ್ಪ ಭಟ್ಟ, ಕೈಯ್ಯಾರ ಕಿಞ್ಞಣ್ಣ ರೈ, ಕುಶಿ ಹರಿದಾಸ ಭಟ್ಟ, ಅಮೃತ ಸೋಮೇಶ್ವರ ಸೇರಿದಂತೆ ಹಲವು ಗಣ್ಯರು ತುಳು ಚಳವಳಿಗೆ ಬಲ ತುಂಬಿದರು ಎಂದು ಅವರು ಸ್ಮರಿಸಿದರು.

ಜನಪ್ರತಿನಿಧಿಗಳ ಹೋರಾಟವೂ ತುಳು ಭಾಷೆಯ ಮಾನ್ಯತೆಗಾಗಿ ಮಹತ್ವದ ಪಾತ್ರ ವಹಿಸಿದೆ. 1983ರಲ್ಲಿ ವಸಂತ ಬಂಗೇರ ಅವರು ವಿಧಾನಸಭೆಯಲ್ಲಿ ತುಳುವಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಮುಂದಾಗಿದ್ದನ್ನು ಅವರು ಉಲ್ಲೇಖಿಸಿದರು. ಇತ್ತೀಚಿನ ದಿನಗಳಲ್ಲಿ ವಿಧಾನಸಭೆಯಲ್ಲಿ ತುಳುವಿನಲ್ಲಿ ಮಾತನಾಡಲು ಕರಾವಳಿಯ ಜನಪ್ರತಿನಿಧಿಗಳಿಗೆ ಅವಕಾಶ ದೊರೆತಿರುವುದು ಭಾಷೆಯ ಅಸ್ತಿತ್ವ ಹಾಗೂ ಪ್ರಾಮುಖ್ಯತೆಯನ್ನು ಮತ್ತಷ್ಟು ಬಿಂಬಿಸಿದೆ ಎಂದು ಹೇಳಿದರು.
ತುಳುವಿಗೆ ಆಡಳಿತ ಭಾಷೆಯ ಸ್ಥಾನಮಾನ ನೀಡುವ ಪ್ರಕ್ರಿಯೆಯಲ್ಲಿ ವಿವಿಧ ಹಂತಗಳಲ್ಲಿ ಸರ್ಕಾರಗಳು ಕೈಗೊಂಡ ಕ್ರಮಗಳನ್ನು ತಾರಾನಾಥ ಗಟ್ಟಿ ಕಾಪಿಕಾಡ್ ವಿವರಿಸಿದರು. ಹಿಂದಿನ ಸರ್ಕಾರವು ಮೋಹನ್ ಆಳ್ವ ಅವರ ನೇತೃತ್ವದಲ್ಲಿ ವರದಿ ಪಡೆದುಕೊಂಡಿತ್ತು. ಬಳಿಕ ಸಿದ್ದರಾಮಯ್ಯ ಅವರ ಸರ್ಕಾರ ತಾತ್ವಿಕವಾಗಿ ಒಪ್ಪಿಗೆ ನೀಡಿತ್ತು. ತುಳುವನ್ನು ಹೆಚ್ಚುವರಿ ಅಧಿಕೃತ ಭಾಷೆಯಾಗಿ ಅನುಷ್ಠಾನಗೊಳಿಸುವ ಕುರಿತು ಅಧ್ಯಯನ ನಡೆಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಪರ ನಿರ್ದೇಶಕರಾಗಿದ್ದ ಕೆ.ಎಂ. ಗಾಯತ್ರಿ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿಯು ಆಂಧ್ರಪ್ರದೇಶಕ್ಕೆ ಭೇಟಿ ನೀಡಿ ಉರ್ದು ಭಾಷೆಯನ್ನು ಹೆಚ್ಚುವರಿ ಅಧಿಕೃತ ಭಾಷೆಯಾಗಿ ಅನುಷ್ಠಾನಗೊಳಿಸಿರುವ ವ್ಯವಸ್ಥೆಯನ್ನು ಅಧ್ಯಯನ ಮಾಡಿ ವರದಿ ಸಲ್ಲಿಸಿತ್ತು. ಈ ವರದಿಯ ಆಧಾರದಲ್ಲಿಯೇ ತುಳುವಿಗೆ ಹೆಚ್ಚುವರಿ ಆಡಳಿತ ಭಾಷೆಯ ಮಾನ್ಯತೆ ದೊರೆತಿದೆ ಎಂದರು.
1994ರಲ್ಲಿ ಅಂದಿನ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯ್ಲಿ ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸ್ಥಾಪಿಸಿದ್ದು ತುಳು ಭಾಷೆಯ ಬೆಳವಣಿಗೆಗೆ ಮಹತ್ವದ ತಿರುವು ನೀಡಿತು. ಅಕಾಡೆಮಿಯ ಮೂಲಕ ತುಳು ಸಾಹಿತ್ಯ, ಸಂಶೋಧನೆ ಹಾಗೂ ಪ್ರಕಟಣಾ ಕ್ಷೇತ್ರಗಳಿಗೆ ಉತ್ತೇಜನ ದೊರೆಯಿತು. 2010ರಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಶಾಲೆಗಳಲ್ಲಿ ತುಳುವನ್ನು ತೃತೀಯ ಭಾಷೆಯಾಗಿ ಬೋಧಿಸಲಾಗುತ್ತಿದ್ದು, ಪ್ರತಿವರ್ಷ ಸುಮಾರು 800ರಿಂದ 1,000 ವಿದ್ಯಾರ್ಥಿಗಳು ತುಳು ವಿಷಯವನ್ನು ಆಯ್ಕೆ ಮಾಡಿಕೊಂಡು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿದ್ದಾರೆ. 2018ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ತುಳು ಎಂ.ಎ. ಕೋರ್ಸ್ ಆರಂಭವಾಗಿರುವುದು ಮತ್ತೊಂದು ಪ್ರಮುಖ ಬೆಳವಣಿಗೆಯಾಗಿದೆ ಎಂದರು.

ತುಳುವಿಗೆ ಹೆಚ್ಚುವರಿ ಆಡಳಿತ ಭಾಷೆಯ ಮಾನ್ಯತೆ ದೊರೆತಿರುವುದರಿಂದ ಶಿಕ್ಷಣ ಕ್ಷೇತ್ರಕ್ಕೂ ಹೆಚ್ಚಿನ ಬಲ ಸಿಗಲಿದೆ. ಶಾಲೆ ಹಾಗೂ ಕಾಲೇಜುಗಳಲ್ಲಿ ತುಳು ಪಠ್ಯವನ್ನು ವಿಸ್ತರಿಸಲು ಅನುಕೂಲವಾಗಲಿದ್ದು, ಭಾಷೆಗೆ ಅಧಿಕೃತ ಮಾನ್ಯತೆ ಇದೆಯೇ ಎಂಬ ಪ್ರಶ್ನೆಗಳಿಗೆ ಇದೀಗ ಸ್ಪಷ್ಟ ಉತ್ತರ ದೊರೆತಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿಗಳು ಹಾಗೂ ತಾಲೂಕು ಮಟ್ಟದ ಕಚೇರಿಗಳಲ್ಲಿ ತುಳು ಭಾಷೆಯ ಬಳಕೆಗೆ ಅವಕಾಶ ಸಿಗಲಿದ್ದು, ತುಳುವಿನಲ್ಲಿ ಅರ್ಜಿ ಸಲ್ಲಿಸುವ ವ್ಯವಸ್ಥೆ ಮತ್ತಷ್ಟು ಬಲಪಡಲಿದೆ. ಅಗತ್ಯವಿರುವ ಕಡೆ ತುಳು ಅನುವಾದಕರ ನೇಮಕಕ್ಕೂ ಅವಕಾಶ ಸಿಗಲಿದೆ ಎಂದು ಅವರು ಹೇಳಿದರು.
ಸ್ಥಳೀಯ ಆಡಳಿತ ವ್ಯವಸ್ಥೆಯಲ್ಲೂ ತುಳು ಬಳಕೆಗೆ ಹೆಚ್ಚಿನ ಅವಕಾಶ ದೊರೆಯಲಿದೆ. ಪಂಚಾಯತ್ ಹಾಗೂ ಸ್ಥಳೀಯ ಸಂಸ್ಥೆಗಳ ಚರ್ಚೆಗಳಲ್ಲಿ ತುಳು ಬಳಕೆಗೆ ಉತ್ತೇಜನ ಸಿಗುವುದರ ಜೊತೆಗೆ ತುಳುನಾಡಿನ ಇತಿಹಾಸ, ಪರಂಪರೆ, ಜಾನಪದ, ಆಚರಣೆ ಹಾಗೂ ಸಾಂಸ್ಕೃತಿಕ ಸಂಪತ್ತಿನ ದಾಖಲೀಕರಣಕ್ಕೂ ಇದು ಸಹಕಾರಿಯಾಗಲಿದೆ. ಭಾಷೆ ಎಂದರೆ ಕೇವಲ ಸಂವಹನದ ಸಾಧನವಲ್ಲ; ಅದು ಒಂದು ಸಮುದಾಯದ ಸಂಸ್ಕೃತಿ ಮತ್ತು ಪರಂಪರೆಯ ಪ್ರತಿಬಿಂಬವಾಗಿದೆ. ಹೀಗಾಗಿ ತುಳುವಿಗೆ ದೊರೆತಿರುವ ಮಾನ್ಯತೆ ತುಳುನಾಡಿನ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗೆ ಸಹಕಾರಿಯಾಗಲಿದೆ ಎಂದರು.
ತುಳುವನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕೆಂಬ ಬೇಡಿಕೆ ಹಲವು ದಶಕಗಳಿಂದ ಇದೆ. 2001ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಸರ್ಕಾರ ಕೇಂದ್ರಕ್ಕೆ ಈ ಕುರಿತು ಶಿಫಾರಸು ಮಾಡಿತ್ತು. ಬಳಿಕವೂ ವಿವಿಧ ಜನಪ್ರತಿನಿಧಿಗಳು ಸಂಸತ್‌ನಲ್ಲಿ ಈ ಬೇಡಿಕೆಯನ್ನು ಪ್ರಸ್ತಾಪಿಸಿದ್ದಾರೆ. ಇದೀಗ ಕರ್ನಾಟಕದಲ್ಲಿ ತುಳು ಹೆಚ್ಚುವರಿ ಆಡಳಿತ ಭಾಷೆಯಾಗಿ ಮಾನ್ಯತೆ ಪಡೆದಿರುವುದು ಎಂಟನೇ ಪರಿಚ್ಛೇದಕ್ಕೆ ತುಳುವನ್ನು ಸೇರಿಸುವ ಬೇಡಿಕೆಗೆ ಮತ್ತಷ್ಟು ಬಲ ನೀಡಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಜಾಗತೀಕರಣದ ಸಂದರ್ಭದಲ್ಲಿ ದೊಡ್ಡ ಭಾಷೆಗಳ ಪ್ರಭಾವದಿಂದ ಪ್ರಾದೇಶಿಕ ಭಾಷೆಗಳು ಹಲವು ಸವಾಲುಗಳನ್ನು ಎದುರಿಸುತ್ತಿವೆ. ಇಂತಹ ಸಂದರ್ಭದಲ್ಲಿ ಸರ್ಕಾರದ ಅಧಿಕೃತ ಬೆಂಬಲ ತುಳು ಭಾಷೆಯ ಮುಂದಿನ ಬೆಳವಣಿಗೆಗೆ ಮಹತ್ವದ ನೆರವಾಗಲಿದೆ. ಹೊಸ ತಲೆಮಾರಿಗೆ ತುಳುವನ್ನು ಕೊಂಡೊಯ್ಯಲು ಈ ಮಾನ್ಯತೆ ಆತ್ಮವಿಶ್ವಾಸ ಮೂಡಿಸಿದೆ ಎಂದರು.
ಜನಗಣತಿಯಲ್ಲಿ ತುಳುವರ ಸಂಖ್ಯೆ ಅಧಿಕೃತವಾಗಿ ಸುಮಾರು 18.5 ಲಕ್ಷ ಎಂದು ದಾಖಲಾಗಿದ್ದರೂ, ದೇಶ ಹಾಗೂ ವಿದೇಶಗಳಲ್ಲಿ ನೆಲೆಸಿರುವ ತುಳುವರ ಸಂಖ್ಯೆ ಇದಕ್ಕಿಂತ ಬಹಳ ಹೆಚ್ಚಿದೆ ಎಂಬುದು ತುಳು ಸಂಘಟನೆಗಳ ಅಭಿಪ್ರಾಯವಾಗಿದೆ. ಭಾಷೆಗೆ ಅಧಿಕೃತ ಮಾನ್ಯತೆ ಇಲ್ಲದ ಕಾರಣ ಹೊರನಾಡಿನಲ್ಲಿ ನೆಲೆಸಿರುವ ಕೆಲ ತುಳುವರು ಜನಗಣತಿಯಲ್ಲಿ ತಮ್ಮ ಮಾತೃಭಾಷೆಯಾಗಿ ತುಳುವನ್ನು ದಾಖಲಿಸಲು ಹಿಂಜರಿದಿರುವ ಸಾಧ್ಯತೆ ಇದೆ. ಇದೀಗ ಸರ್ಕಾರದ ಮಾನ್ಯತೆಯಿಂದ ಆ ಅಂಜಿಕೆ ದೂರವಾಗಿ, ಮುಂದಿನ ಜನಗಣತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ತಮ್ಮ ಮಾತೃಭಾಷೆಯನ್ನು ‘ತುಳು’ ಎಂದು ದಾಖಲಿಸುವ ವಿಶ್ವಾಸ ಮೂಡಿದೆ ಎಂದು ತಾರಾನಾಥ ಗಟ್ಟಿ ಕಾಪಿಕಾಡ್ ಹೇಳಿದರು.
ತುಳುವಿಗೆ ಮಾನ್ಯತೆ ದೊರಕುವಲ್ಲಿ ತುಳು ಸಂಘಟನೆಗಳು, ಜನಪ್ರತಿನಿಧಿಗಳು, ಸಾಹಿತಿಗಳು, ಕಲಾವಿದರು ಹಾಗೂ ಸಮಸ್ತ ತುಳುವರ ದೀರ್ಘಕಾಲದ ಹೋರಾಟ ಮತ್ತು ಪರಿಶ್ರಮ ಮಹತ್ವದ ಪಾತ್ರ ವಹಿಸಿದೆ. ತುಳುವಿನ ರಕ್ಷಣೆಗೆ ಹಾಗೂ ಬೆಳವಣಿಗೆಗೆ ಬೆಂಬಲ ನೀಡಿದ ಕನ್ನಡಿಗರು ಮತ್ತು ಕರ್ನಾಟಕದ ವಿವಿಧ ಕನ್ನಡ ಸಂಘಟನೆಗಳಿಗೂ ಅವರು ಕೃತಜ್ಞತೆ ಸಲ್ಲಿಸಿದರು.


Best betting experience I have had in a while. The payouts are fair and the process is transparent. Big shoutout to phjilikobet.