ಸೆ.26ರಂದು ‘ಎಂಕ್ಲೆನ ಪಿಲಿ–ನಮ್ಮ ಹುಲಿ’ ಸಾಕ್ಷ್ಯಚಿತ್ರ ಪ್ರಥಮ ಪ್ರದರ್ಶನ

ಮಂಗಳೂರು: ಹುಲಿವೇಷದ ಇತಿಹಾಸ, ಸಾಂಸ್ಕೃತಿಕ ಮಹತ್ವ ಹಾಗೂ ಈ ಪರಂಪರೆಯನ್ನು ಜೀವಂತವಾಗಿರಿಸಿರುವ ಕಲಾವಿದರ ಬದುಕನ್ನು ಪರಿಚಯಿಸುವ ‘ಎಂಕ್ಲೆನ ಪಿಲಿ–ನಮ್ಮ ಹುಲಿ’ ಸಾಕ್ಷ್ಯಚಿತ್ರ ಸೆ.26ರಂದು ಮಂಗಳೂರಿನ ಭಾರತ್ ಸಿನಿಮಾಸ್‌ನಲ್ಲಿ ಪ್ರಥಮ ಪ್ರದರ್ಶನ ಕಾಣಲಿದೆ ಎಂದು ನಿರ್ಮಾಪಕ ಶ್ರೀಕಾಂತ್ ಕಾಮತ್ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹಾಗೂ ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಪ್ರಥಮ ಪ್ರದರ್ಶನ ಉದ್ಘಾಟಿಸಲಿದ್ದಾರೆ. ನಟ ಹಾಗೂ ಗಾಯಕ ಮೈಮ್ ರಾಮದಾಸ್ ಚಿತ್ರಕ್ಕೆ ನಿರೂಪಣೆ ನೀಡಿದ್ದಾರೆ ಎಂದರು.

ನಿರ್ದೇಶಕ ಶ್ರಿತಿಜ್ ಕಾಮತ್ ಮಾತನಾಡಿ, ಸಾಕ್ಷ್ಯಚಿತ್ರವು ಹುಲಿವೇಷದ ಪ್ರದರ್ಶನದ ಹಿಂದಿರುವ ಪರಿಶ್ರಮ, ಸಂಪ್ರದಾಯದ ಮೂಲ, ಬೆಳವಣಿಗೆ ಹಾಗೂ ಕಲಾವಿದರ ಸಮರ್ಪಣೆಯನ್ನು ದಾಖಲಿಸುತ್ತದೆ. ಮಾಜಿ ಕಾರ್ಪೊರೇಟರ್ ಬಜಿಲಕೇರಿ ಕಮಲಾಕ್ಷ ಅವರ ಕುಟುಂಬದ ಸುಮಾರು ಶತಮಾನದ ಹುಲಿವೇಷ ಪರಂಪರೆ ಹಾಗೂ ನಿವೃತ್ತ ಪ್ರಾಧ್ಯಾಪಕ ಉದಯ ಕುಮಾರ್ ಎಂ. ಅವರ ಅನುಭವಗಳನ್ನೂ ಚಿತ್ರ ಒಳಗೊಂಡಿದೆ ಎಂದು ತಿಳಿಸಿದರು.

ಹುಲಿವೇಷದ ಹುಲಿ ಹಾಗೂ ಕಾಡಿನ ಹುಲಿಯ ಚಲನವಲನಗಳ ನಡುವಿನ ಸಾಮ್ಯತೆಯನ್ನೂ ಸಾಕ್ಷ್ಯಚಿತ್ರ ಅನ್ವೇಷಿಸುತ್ತದೆ. ತುಳುನಾಡಿನ ಸಂಸ್ಕೃತಿ ಮತ್ತು ವನ್ಯಜೀವಿ ಸಂರಕ್ಷಣೆಯ ಕುರಿತ ಆಸಕ್ತಿಯಿಂದ ಆರಂಭವಾದ ಈ ಯೋಜನೆಯನ್ನು ಮೊದಲು ತವರೂರಾದ ಮಂಗಳೂರಿನಲ್ಲೇ ಪ್ರದರ್ಶಿಸಲು ನಿರ್ಧರಿಸಲಾಗಿದೆ ಎಂದರು.

ಸೆ.26ರ ಪ್ರದರ್ಶನ ಆಹ್ವಾನಿತರಿಗೆ ಮಾತ್ರ ಸೀಮಿತವಾಗಿದ್ದು, ಸಾರ್ವಜನಿಕ ಚಿತ್ರಮಂದಿರ ಬಿಡುಗಡೆಯಲ್ಲ. ಮುಂದಿನ ದಿನಗಳಲ್ಲಿ ಚಿತ್ರವನ್ನು ಐಎಫ್‌ಎಫ್‌ಐ ಗೋವಾ, ಬುಸಾನ್ ಹಾಗೂ ಟೊರೊಂಟೊ ಸೇರಿದಂತೆ ವಿವಿಧ ಚಲನಚಿತ್ರೋತ್ಸವಗಳಿಗೆ ಸಲ್ಲಿಸಲು ಹಾಗೂ ಬಳಿಕ ಒಟಿಟಿ ವೇದಿಕೆಗಳ ಮೂಲಕ ಹೆಚ್ಚಿನ ಪ್ರೇಕ್ಷಕರಿಗೆ ತಲುಪಿಸುವ ಯೋಜನೆ ಹೊಂದಲಾಗಿದೆ ಎಂದು ಶ್ರಿತಿಜ್ ಕಾಮತ್ ಹೇಳಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!