ಮಂಗಳೂರು: 14 ವರ್ಷಗಳ ಸುದೀರ್ಘ ಕಾಯುವಿಕೆಯ ಬಳಿಕ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶದಂತೆ ವಿಶೇಷ ತನಿಖಾ ತಂಡವನ್ನು (SIT) ಸರ್ಕಾರ ರಚಿಸಿರುವುದು ಸ್ವಾಗತಾರ್ಹ.ಹಾಗೂ ಈ ತಂಡಕ್ಕೆ ಈ ಹಿಂದೆ ಮಂಗಳೂರು ಪೋಲಿಸ್ ಆಯುಕ್ತರಾಗಿದ್ದ ಶಶಿಕುಮಾರ್ ಬದಲಿಗೆ ನಿರ್ಬೀತ ಹಾಗೂ ದಕ್ಷ ಅಧಿಕಾರಿ ಡಿ.ರೂಪಾ ದಿವಾಕರ್ ಮೌದ್ಗಿಲ್ ಸೇರ್ಪಡೆಗೊಳಿಸಿ ತಂಡದ ಮುಖ್ಯಸ್ಥರಾಗಿ ಮಾಡಬೇಕೆಂದು ವಿಮೆನ್ ಇಂಡಿಯಾ ಮೂವ್ಮೆಂಟ್ ಮಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಝರೀನಾ ಉಪ್ಪಿನಂಗಡಿ ಆಗ್ರಹಿಸಿದ್ದಾರೆ

ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆಗೊಳಿಸಿರುವ ಅವರು ಪ್ರಕರಣದ ಹಿಂದಿನ ತನಿಖೆಯಲ್ಲಿ ನಡೆದಿರುವ ಲೋಪಗಳು ಹಾಗೂ ಕಡೆಗಣಿಸಲ್ಪಟ್ಟ ಸಾಕ್ಷ್ಯಗಳ ಕುರಿತು ನ್ಯಾಯಾಲಯ ವ್ಯಕ್ತಪಡಿಸಿರುವ ಗಂಭೀರ ಅಭಿಪ್ರಾಯಗಳನ್ನು ಗಮನದಲ್ಲಿಟ್ಟುಕೊಂಡು, ನಿಷ್ಪಕ್ಷಪಾತ ಹಾಗೂ ಸ್ವತಂತ್ರ ಮರುತನಿಖೆ ನಡೆಸಿ ಸತ್ಯಾಂಶವನ್ನು ಹೊರತರುವ ನಿಟ್ಟಿನಲ್ಲಿ ಈ ಹೊಸ ತನಿಖಾ ತಂಡದ ರಚನೆ ಅನಿವಾರ್ಯವಾಗಿತ್ತು.

ಆದರೆ ಹೊಸ ತನಿಖಾ ತಂಡಕ್ಕೆ ದಕ್ಷತೆ ಮತ್ತು ನಿರ್ಭೀತ ಕಾರ್ಯವೈಖರಿಗೆ ಹೆಸರಾಗಿರುವ ಹಿರಿಯ ಐಪಿಎಸ್ ಅಧಿಕಾರಿ ಡಿ. ರೂಪಾ ದಿವಾಕರ್ ಮೌದ್ಗಿಲ್ ರವರನ್ನು ತನಿಖಾ ತಂಡದ ಮುಖ್ಯಸ್ಥರಾಗಿ ನೇಮಿಸಬೇಕೆಂದು ಸಾರ್ವಜನಿಕ ಬೇಡಿಕೆಯಾಗಿತ್ತು.ಈ ಬೇಡಿಕೆಯನ್ನು ಪರಿಗಣಿಸಿ ,
ಸರ್ಕಾರವು ಈಗಾಗಲೇ ನಿರ್ದೇಶಿಸಿರುವ ಎಸ್ಐಟಿ ತನಿಖಾ ತಂಡದ ಮುಖ್ಯಸ್ಥರಾಗಿರುವ ಹಿರಿಯ ಐಪಿಎಸ್ ಅಧಿಕಾರಿ ಹಾಗೂ ಈ ಹಿಂದೆ ಮಂಗಳೂರು ಪೋಲಿಸ್ ಆಯುಕ್ತರಾದ ಶ್ರೀ .ಎನ್. ಶಶಿಕುಮಾರ್ ಹಾಗೂ ಪ್ರಸ್ತುತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಚ್ಚುವರಿ ಪೋಲಿಸ್ ಅಧೀಕ್ಷಕರಾದ ಶ್ರೀ ವೆಂಕಟೇಶ್ ಪ್ರಸನ್ನ ರವರ ಬಗ್ಗೆ ಭ್ರಷ್ಟಾಚಾರ ಹಾಗೂ ಪ್ರಭಾವಿಗಳ ಒತ್ತಡಕ್ಕೆ ಮಣಿಯುವ ಅಧಿಕಾರಿ ಮತ್ತು ಹಲವಾರು ಆರೋಪಗಳಿರುವ ಅಧಿಕಾರಿಗಳು ಎಂಬುದರ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರವು ತನ್ನ ಆದೇಶವನ್ನು ಮರುಪರಿಶೀಲಿಸಬೇಕು. ಹೊಸ ತನಿಖಾ ತಂಡದ ನೇತೃತ್ವವನ್ನು ಡಿ. ರೂಪಾ ಮೌದ್ಗಿಲ್ ಅವರಿಗೆ ವಹಿಸಬೇಕೆಂದು ವಿಮೆನ್ ಇಂಡಿಯಾ ಮೂವ್ಮೆಂಟ್ ಆಗ್ರಹಿಸುತ್ತದೆ.

ಯಾವುದೇ ರಾಜಕೀಯ, ಧಾರ್ಮಿಕ ಅಥವಾ ಸಾಮಾಜಿಕ ಒತ್ತಡಗಳಿಗೆ ಹಾಗೂ ಬಾಹ್ಯ ಪ್ರಭಾವಗಳಿಗೆ ಮಣಿಯದೆ, ಲಭ್ಯವಿರುವ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಹಾಗೂ ಪ್ರಮುಖ ಸಾಕ್ಷಿಯಾಧರಗಳನ್ನು ನಾಶ ಮಾಡಿದ ಅಧಿಕಾರಿಗಳ ವಿರುದ್ಧ
ಸಂಪೂರ್ಣ ಸ್ವಾತಂತ್ರ್ಯದೊಂದಿಗೆ ಈ ಎಸ್ಐಟಿ ತಂಡವು ತನಿಖೆ ನಡೆಸಬೇಕು. ನಿಜವಾದ ಅಪರಾಧಿಗಳನ್ನು ಪತ್ತೆಹಚ್ಚಿ ಶಿಕ್ಷೆಗೆ ಒಳಪಡಿಸುವುದರೊಂದಿಗೆ, ದೀರ್ಘಕಾಲದಿಂದ ನ್ಯಾಯಕ್ಕಾಗಿ ಕಾಯುತ್ತಿರುವ ಸೌಜನ್ಯಳ ಕುಟುಂಬಕ್ಕೆ ಕೂಡಲೇ ನ್ಯಾಯ ಒದಗಿಸಬೇಕು .
ಸೌಜನ್ಯಳ ಕುಟುಂಬಕ್ಕೆ ಸಂಪೂರ್ಣ ನ್ಯಾಯ ದೊರಕುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

