ಸುರತ್ಕಲ್ ಪರಿಸರದ ಅಪಘಾತಕ್ಕೆ ಆಹ್ವಾನ ನೀಡುತ್ತಿದ್ದ 12 ಹಂಪ್ಸ್‌ಗಳಿಗೆ ಬಣ್ಣ ಬಳಿದ ‘ಮೀಡಿಯಾ ಮನಸುಗಳು’!

ಸುರತ್ಕಲ್: ರಾತ್ರಿಯ ಕತ್ತಲಿನಲ್ಲಿ ಬರಿಗಣ್ಣಿಗೆ ಸರಿಯಾಗಿ ಕಾಣಿಸದೆ, ಅಪಘಾತಗಳಿಗೆ ತೆರೆದಿಟ್ಟ ಬಾಗಿಲಿನಂತಿದ್ದ ಸುರತ್ಕಲ್ ಪರಿಸರದ 12ರಷ್ಟು ಹಂಪ್ಸ್‌ಗಳಿಗೆ ‘ಮೀಡಿಯಾ ಮನಸುಗಳು’ ಸಂಘಟನೆಯ ಯುವಪಡೆ ಭಾನುವಾರ ತಡರಾತ್ರಿ ಬಿಳಿ ಬಣ್ಣ ಬಳಿಯುವ ಮೂಲಕ ರಸ್ತೆ ಸವಾರರಿಗೆ ದೊಡ್ಡ ಗಂಡಾಂತರದಿಂದ ಮುಕ್ತಿ ನೀಡಿದೆ.

ಸುರತ್ಕಲ್ ಮಹಾನಗರ ಪಾಲಿಕೆ ಕಚೇರಿಯಿಂದ ಅಥರ್ವ ಆಸ್ಪತ್ರೆ ಮಾರ್ಗವಾಗಿ ತಡಂಬೈಲ್ ಮಾರಿಗುಡಿ ಸಂಪರ್ಕಿಸುವ ಸರ್ವಿಸ್ ರಸ್ತೆ, ಸೂರಜ್ ಹೋಟೆಲ್ ಮುಂಭಾಗ, ಸುರತ್ಕಲ್ ಬಸ್ ನಿಲ್ದಾಣದಿಂದ ಗೋವಿಂದ ದಾಸ್ ಕಾಲೇಜು ಸಂಪರ್ಕಿಸುವ ರಸ್ತೆ ಹಾಗೂ ಪೋಸ್ಟ್ ಆಫೀಸ್‌ನಿಂದ ಸುರತ್ಕಲ್ ಚರ್ಚ್ ಸಂಪರ್ಕಿಸುವ ಪ್ರಮುಖ ಮಾರ್ಗಗಳಲ್ಲಿ ಸೂಕ್ತ ಬಣ್ಣವಿಲ್ಲದ ಹಂಪ್ಸ್‌ಗಳು ವಾಹನ ಸವಾರರಿಗೆ ನಿತ್ಯಕಂಟಕವಾಗಿದ್ದವು.
ರಾತ್ರಿ ಸಂಚರಿಸುವ ದ್ವಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನ ಸವಾರರಿಗೆ ಈ ಹಂಪ್ಸ್‌ಗಳು ತಕ್ಷಣಕ್ಕೆ ಗೋಚರಿಸದೆ ಗಂಭೀರ ಅಪಘಾತಗಳು ಸಂಭವಿಸುವ ಭೀತಿ ಎದುರಾಗಿತ್ತು.

ಮಧ್ಯರಾತ್ರಿ ಶ್ರಮದಾನ:
ಸಾರ್ವಜನಿಕರ ಜೀವಕ್ಕಿದ್ದ ಈ ಅಪಾಯದ ಗಂಭೀರತೆಯನ್ನು ಅರಿತ ‘ಮೀಡಿಯಾ ಮನಸುಗಳು’ ಸಂಘಟನೆಯ ಸದಸ್ಯರು, ಕೇವಲ ಸಮಸ್ಯೆಯನ್ನು ಎತ್ತಿ ತೋರಿಸದೆ ತಾವೇ ಖುದ್ದಾಗಿ ಪರಿಹಾರ ಕಂಡುಕೊಳ್ಳಲು ಮುಂದಾದರು. ಭಾನುವಾರ ತಡರಾತ್ರಿ ಕಾರ್ಯಾಚರಣೆಗೆ ಇಳಿದ ಯುವಪಡೆ, ಹಗಲಿಡೀ ವಾಹನಗಳ ದಟ್ಟಣೆ ಮುಗಿದ ಬಳಿಕ ರಸ್ತೆಯಲ್ಲಿದ್ದ ಒಟ್ಟು 12 ಹಂಪ್ಸ್‌ಗಳಿಗೆ ಸ್ಪಷ್ಟವಾಗಿ ಕಾಣಿಸುವ ಬಿಳಿಯ ಬಣ್ಣವನ್ನು ಬಳೆದು ಫಳಫಳನೆ ಹೊಳೆಯುವಂತೆ ಮಾಡಿದರು.


ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ವಾಹನ ಸವಾರರ ಜೀವ ರಕ್ಷಣೆಯ ಉದ್ದೇಶದಿಂದ ಸ್ವಯಂಪ್ರೇರಿತರಾಗಿ ಶ್ರಮಿಸಿದ ಯುವಕರ ಈ ಮಾದರಿ ಕಾರ್ಯಕ್ಕೆ ಕಾರ್ನಾಡ್ ರಚನಾ ಎಂಟರ್‌ಪ್ರೈಸಸ್ ಮಾಲಕರು ಅಗತ್ಯ ನೆರವು ನೀಡಿ ಬೆಂಬಲಿಸಿದರು.

ಈ ಶ್ರಮದಾನ ಕಾರ್ಯಾಚರಣೆಯಲ್ಲಿ ‘ಮೀಡಿಯಾ ಮನಸುಗಳು’ ತಂಡದ ಮುಖಂಡರಾದ ಶಶಿ ಬೆಳ್ಳಾಯರು, ಗಿರೀಶ್ ಮಣೇಲ್, ರಜನ್ ಕುಮಾರ್ ಕಾವೂರು, ಸಂದೇಶ್ ಶೆಟ್ಟಿ ಹಾಗೂ ಶಿವು ಕುಲಾಲ್ ಭಾಗವಹಿಸಿದರು.

ಅಧಿಕಾರಿಗಳಿಗಾಗಿ ಕಾಯದೆ, ಸಾರ್ವಜನಿಕರ ಸುರಕ್ಷತೆಗೆ ತಕ್ಷಣ ಸ್ಪಂದಿಸಿದ ‘ಮೀಡಿಯಾ ಮನಸುಗಳು’ ತಂಡದ ಈ ಕಳಕಳಿಗೆ ಹಾಗೂ ಸಮಾಜಮುಖಿ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆ ಮತ್ತು ಪ್ರಶಂಸೆ ವ್ಯಕ್ತವಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!