ಮಂಗಳೂರು: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ಕಾರ್ಯದಲ್ಲಿ ತೊಡಗಿರುವ ಬಿಜೆಪಿ ಕಾರ್ಯಕರ್ತರನ್ನು ಬೆದರಿಸುವುದು ಅಥವಾ ಕಿರುಕುಳ ನೀಡುವುದು ಕಂಡು ಬಂದರೆ ಸಹಿಸುವುದಿಲ್ಲ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಎಚ್ಚರಿಕೆ ನೀಡಿದ್ದಾರೆ.
ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿ ಶುದ್ಧೀಕರಣವು ಚುನಾವಣಾ ಆಯೋಗದ ನಿಯಮಾನುಸಾರ ನಡೆಯುವ ಪ್ರಕ್ರಿಯೆ. ಈ ಕಾರ್ಯದಲ್ಲಿ ತೊಡಗಿರುವ ಕಾರ್ಯಕರ್ತರಿಗೆ ಯಾವುದೇ ರೀತಿಯ ಒತ್ತಡ ಅಥವಾ ಬೆದರಿಕೆ ಹಾಕುವ ಪ್ರಯತ್ನ ನಡೆದರೆ ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಹೇಳಿದರು.

ಕಾಂಗ್ರೆಸ್ ಆರೋಪಕ್ಕೆ ಸಾಕ್ಷ್ಯ ನೀಡಲಿ
ಮತದಾರರ ಪಟ್ಟಿಯಿಂದ ಅಕ್ರಮವಾಗಿ ಹೆಸರುಗಳನ್ನು ತೆಗೆದುಹಾಕಲಾಗುತ್ತಿದೆ ಎಂಬ ಕಾಂಗ್ರೆಸ್ ಆರೋಪವನ್ನು ತಳ್ಳಿಹಾಕಿದ ಚೌಟ, ಆರೋಪಗಳಿಗೆ ದಾಖಲೆಗಳೊಂದಿಗೆ ಉತ್ತರ ನೀಡುವಂತೆ ಸವಾಲು ಹಾಕಿದರು.
“ಅಕ್ರಮವಾಗಿ ಹೆಸರು ತೆಗೆದುಹಾಕಲಾಗಿದೆ ಎನ್ನುವ ಒಬ್ಬ ಮತದಾರನನ್ನಾದರೂ ಗುರುತಿಸಿ ಚುನಾವಣಾಧಿಕಾರಿ ಮುಂದೆ ಹಾಜರುಪಡಿಸಲಿ. ಸಾಕ್ಷ್ಯವಿಲ್ಲದೆ ಆರೋಪ ಮಾಡುವ ಬದಲು ದಾಖಲೆಗಳನ್ನು ಬಿಡುಗಡೆ ಮಾಡಲಿ” ಎಂದು ಹೇಳಿದರು.
ಚುನಾವಣಾ ಆಯೋಗದ ಕಾರ್ಯವೈಖರಿ ಬಗ್ಗೆ ಜನರಲ್ಲಿ ಅನುಮಾನ ಮೂಡಿಸಿ ಗೊಂದಲ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಕಾಂಗ್ರೆಸ್ ವಿರುದ್ಧ ಆರೋಪಿಸಿದರು.

ಮತದಾರರ ಪಟ್ಟಿ ಪರಿಷ್ಕರಣೆ ನಿಯಮಿತ ಪ್ರಕ್ರಿಯೆ
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಹೊಸ ಪ್ರಕ್ರಿಯೆಯಲ್ಲ. ಮೃತಪಟ್ಟವರ ಹೆಸರುಗಳನ್ನು ತೆರವುಗೊಳಿಸುವುದು, ಸ್ಥಳಾಂತರಗೊಂಡ ಮತದಾರರ ವಿವರಗಳನ್ನು ಸರಿಪಡಿಸುವುದು ಹಾಗೂ ಒಂದಕ್ಕಿಂತ ಹೆಚ್ಚು ಬಾರಿ ದಾಖಲಾಗಿರುವ ಹೆಸರುಗಳನ್ನು ತೆಗೆದುಹಾಕುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದು ಚೌಟ ವಿವರಿಸಿದರು.
ರಾಜಕೀಯ ಪಕ್ಷಗಳಿಗೆ BLA-2 ಪ್ರತಿನಿಧಿಗಳನ್ನು ನೇಮಿಸಲು ಚುನಾವಣಾ ಆಯೋಗ ಅವಕಾಶ ನೀಡಿದೆ. ಆದರೆ ಈ ಕಾನೂನಾತ್ಮಕ ಪ್ರಕ್ರಿಯೆಗೆ ಅಡ್ಡಿಪಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.

ಫಾರಂ-7 ಸಲ್ಲಿಸಿದ ತಕ್ಷಣ ಹೆಸರು ಡಿಲೀಟ್ ಆಗಲ್ಲ
ಫಾರಂ-7 ಸಲ್ಲಿಸಿದ ಕೂಡಲೇ ಮತದಾರರ ಹೆಸರು ಪಟ್ಟಿಯಿಂದ ಅಳಿಸಲಾಗುವುದಿಲ್ಲ. ಆಕ್ಷೇಪಣೆ ಬಂದ ಬಳಿಕ ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸಿ, ನಿಯಮಾನುಸಾರ ಕ್ರಮ ಕೈಗೊಳ್ಳುತ್ತಾರೆ ಎಂದು ಚೌಟ ಸ್ಪಷ್ಟಪಡಿಸಿದರು.
ಒಂದು ವೇಳೆ ಅರ್ಹ ಮತದಾರರ ಹೆಸರು ಪಟ್ಟಿಯಿಂದ ಕೈಬಿಟ್ಟಿದ್ದರೆ ಫಾರಂ-6 ಮೂಲಕ ಮತ್ತೆ ಹೆಸರು ಸೇರ್ಪಡೆಗೆ ಅವಕಾಶವಿದೆ. ಹೀಗಾಗಿ ಫಾರಂ-7 ಕುರಿತು ಜನರಲ್ಲಿ ತಪ್ಪು ಮಾಹಿತಿ ಹರಡಬಾರದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಪೂಜಾ ಪೈ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ, ಸುಜಿತ್ ಪ್ರತಾಪ್, ರಾಜಗೋಪಾಲ್ ರೈ, ವಸಂತ ಜೆ. ಪೂಜಾರಿ, ಜೀವನ್ ಕುಮಾರ್ ತೊಕ್ಕೊಟ್ಟು ಹಾಗೂ ಸಂಜಯ ಪ್ರಭು ಉಪಸ್ಥಿತರಿದ್ದರು.


