ಪೆರ್ಮುದೆ ಸಂತ ಸ್ನಾನಿಕ ಯೋಹಾನ್ನ ದೇವಾಲಯದ ವಜ್ರ ಮಹೋತ್ಸವ ಅ.15ರಂದು

ಮಂಗಳೂರು: ಪೆರ್ಮುದೆ ಸಂತ ಸ್ನಾನಿಕ ಯೋಹಾನ್ನ ದೇವಾಲಯದ ವಜ್ರ ಮಹೋತ್ಸವ ಸಂಭ್ರಮ ಹಾಗೂ ನವೀಕೃತ ದೇವಾಲಯದ ಆಶೀರ್ವಚನ ಮತ್ತು ಉದ್ಘಾಟನಾ ಸಮಾರಂಭ ಅ.15ರಂದು ಸಂಜೆ 3 ಗಂಟೆಗೆ ನಡೆಯಲಿದೆ ಎಂದು ದೇವಾಲಯದ ಧರ್ಮಗುರು ವಂ. ರೊನಾಲ್ಡ್ ಪಿಂಟೊ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 65 ವರ್ಷಗಳ ಹಿಂದೆ ಕುಮಾರಿ ಜುಲಿಯಾನ ನಜ್ರೆತ್ ಕುಟುಂಬದ ಉದಾರ ಸಹಕಾರದಿಂದ ದೇವಾಲಯದ ಕಟ್ಟಡ ನಿರ್ಮಿಸಲಾಗಿತ್ತು. 1965ರ ಅ.15ರಂದು ಪೆರ್ಮುದೆ ಧರ್ಮಕೇಂದ್ರ ಸ್ಥಾಪನೆಯಾಗಿದ್ದು, ಇದೀಗ ಶಿಥಿಲಗೊಂಡಿದ್ದ ಹಳೆಯ ದೇವಾಲಯವನ್ನು ನವೀಕರಿಸಲಾಗಿದೆ ಎಂದರು.

ನವೀಕೃತ ದೇವಾಲಯದ ಉದ್ಘಾಟನೆಯನ್ನು ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷ ಅತೀ ವಂ. ಡಾ. ಅಲೋಶಿಯಸ್ ಪೌಲ್ ಡಿಸೋಜ ನೆರವೇರಿಸಲಿದ್ದು, ಆಶೀರ್ವಚನ ಹಾಗೂ ದಿವ್ಯ ಬಲಿಪೂಜೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತೀ ವಂ. ಡಾ. ಪೀಟರ್ ಪಾವ್ಲ್ ಸಲ್ದಾನ್ಹ ನೆರವೇರಿಸುವರು. ಮೈಸೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತೀ ವಂ. ಡಾ. ಫ್ರಾನ್ಸಿಸ್ ಸೆರಾವೊ ಪ್ರವಚನ ನೀಡಲಿದ್ದಾರೆ.

ದೇವಾಲಯದ ಉದ್ಘಾಟನೆಯ ಬಳಿಕ ನಡೆಯುವ ವಜ್ರ ಮಹೋತ್ಸವದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಪೀಟರ್ ಪಾವ್ಲ್ ಸಲ್ದಾನ್ಹ ವಹಿಸಲಿದ್ದಾರೆ. ಅತೀ ವಂ. ಡಾ. ಅಲೋಶಿಯಸ್ ಪೌಲ್ ಡಿಸೋಜ, ಅತೀ ವಂ. ಡಾ. ಫ್ರಾನ್ಸಿಸ್ ಸೆರಾವೊ, ಅತೀ ವಂ. ಮ್ಯಾಕ್ಸಿಂ ಎಲ್. ನೊರೊನ್ಹಾ, ವಂ. ರವಿ ರುಡೋಲ್ಫ್ ಡೆ ಸಾ, ವೇಣುಗೋಪಾಲ ಪೆಜತ್ತಾಯ, ಮೊಹಮ್ಮದ್ ಕುಂಞ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಸಚಿವ ಯು.ಟಿ. ಖಾದರ್, ಶಾಸಕ ಉಮಾನಾಥ್ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಸೇರಿದಂತೆ ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಅ.11ರಂದು ಸಂಜೆ 4 ಗಂಟೆಗೆ ಪೆರ್ಮುದೆ ಪೇಟೆಯಿಂದ ದೇವಾಲಯದವರೆಗೆ ಹೊರೆ ಕಾಣಿಕೆ ಮೆರವಣಿಗೆ ನಡೆಯಲಿದೆ. ಅ.15ರಂದು ಸಭಾ ಕಾರ್ಯಕ್ರಮದ ಬಳಿಕ ದೇವದಾಸ್ ಕಾಪಿಕಾಡ್ ತಂಡದಿಂದ ‘ಸುಣ್ಣದ ಬೊಟ್ಟು’ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ. ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರಿಗೆ ಅನ್ನಸಂತರ್ಪಣೆಯ ವ್ಯವಸ್ಥೆಯನ್ನೂ ಮಾಡಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಧರ್ಮಕೇಂದ್ರ ಪಾಲನಾ ಮಂಡಳಿಯ ಉಪಾಧ್ಯಕ್ಷ ರೋಶನ್ ರೊಡ್ರಿಗಸ್, ಕಾರ್ಯದರ್ಶಿ ಅನಿತಾ ಡಿಸೋಜ, ಪ್ರಮುಖ ದಾನಿ ರೊನಾಲ್ಡ್ ಫೆರ್ನಾಂಡಿಸ್ ಹಾಗೂ ಮಾಧ್ಯಮ ಸಮಿತಿ ಸಂಚಾಲಕ ರೋಶನ್ ತಾವ್ರೊ ಉಪಸ್ಥಿತರಿದ್ದರು.

SHARE
Loading spinner

One thought on “ಪೆರ್ಮುದೆ ಸಂತ ಸ್ನಾನಿಕ ಯೋಹಾನ್ನ ದೇವಾಲಯದ ವಜ್ರ ಮಹೋತ್ಸವ ಅ.15ರಂದು”

Leave a Reply

Your email address will not be published. Required fields are marked *

error: Content is protected !!