
ಬಂಟ್ವಾಳ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯ ಹಲ್ಲೆಯಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಬೆಳಗಾವಿ ಜಿಲ್ಲೆಯ ಅಥಣಿ ನಿವಾಸಿ ಅರುಣ್ ಮಹಾದೇವ್ ದೇಸಂಗಿ ಅವರ ಸಹೋದರಿ ಸುನೀತಾ ಮಹಾದೇವ್ ದೇಸಂಗಿ (34) ಮೃತಪಟ್ಟ ಮಹಿಳೆ. ಇವರನ್ನು ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಿವಾಸಿ ಸಂಜೀವಕುಮಾರ್ (36) ಎಂಬವರಿಗೆ ವಿವಾಹ ಮಾಡಿಕೊಡಲಾಗಿತ್ತು. ದಂಪತಿ ಬಂಟ್ವಾಳದ ವಗ್ಗದಲ್ಲಿ ವಾಸವಾಗಿದ್ದರು ಎನ್ನಲಾಗಿದೆ.

ದಂಪತಿಯ ನಡುವೆ ವೈವಾಹಿಕ ಕಲಹ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಸಂಬಂಧಿಕರು ರಾಜಿ ಸಂಧಾನ ನಡೆಸಿದ್ದರು. ಹೆರಿಗೆಯ ಬಳಿಕ ತವರು ಮನೆಯಲ್ಲಿದ್ದ ಸುನೀತಾ ಅವರನ್ನು ಅಕ್ಟೋಬರ್ 4ರಂದು ಪತಿ ಸಂಜೀವಕುಮಾರ್ ಬಂಟ್ವಾಳದ ಮನೆಗೆ ಕರೆತಂದಿದ್ದರು.
ಅಕ್ಟೋಬರ್ 22ರಂದು ಸುನೀತಾ ಅವರು ಸಹೋದರ ಅರುಣ್ ಅವರಿಗೆ ಕರೆ ಮಾಡಿ, ಪತಿ ಕಿರುಕುಳ ನೀಡುತ್ತಿದ್ದು, ಹಲ್ಲೆ ನಡೆಸಿರುವುದಾಗಿ ತಿಳಿಸಿದ್ದರು ಎನ್ನಲಾಗಿದೆ. ಮರುದಿನ ಅಂದರೆ ಅಕ್ಟೋಬರ್ 23ರ ಮುಂಜಾನೆ ಸಂಜೀವಕುಮಾರ್ ಅವರು ಅರುಣ್‌ಗೆ ಕರೆ ಮಾಡಿ, ಸುನೀತಾ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಿಸುತ್ತಿರುವುದಾಗಿ ತಿಳಿಸಿದ್ದರು.

ಬಳಿಕ ಸ್ಥಳಕ್ಕೆ ಬಂದ ಅರುಣ್ ಅವರು ಸುನೀತಾ ಮೃತಪಟ್ಟಿರುವುದನ್ನು ಕಂಡಿದ್ದಾರೆ. ಮೃತದೇಹವನ್ನು ಪರಿಶೀಲಿಸಿದಾಗ ಹಲ್ಲೆಯ ಗಾಯಗಳು ಹಾಗೂ ರಕ್ತ ಕಂಡುಬಂದಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಕ್ಟೋಬರ್ 22ರ ರಾತ್ರಿ ಮತ್ತು ಅಕ್ಟೋಬರ್ 23ರ ಮುಂಜಾನೆಯ ನಡುವೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸುನೀತಾ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ದೂರು ನೀಡಲಾಗಿದೆ.

ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 142/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 103ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಆರೋಪಿ ಸಂಜೀವಕುಮಾರ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

