​ಮಂಜೇಶ್ವರದಲ್ಲಿ ಕಳಪೆ ಕಾಮಗಾರಿಯ ಅಟ್ಟಹಾಸ: 6 ತಿಂಗಳಲ್ಲೇ ಕಿತ್ತುಬಂದ 14 ಲಕ್ಷದ ರಸ್ತೆ

​ಮಂಜೇಶ್ವರ: ಮಂಜೇಶ್ವರ ಬ್ಲಾಕ್ ಪಂಚಾಯತ್ ಅನುದಾನದಲ್ಲಿ ಸುಮಾರು 14 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ‘ಮಂಜೇಶ್ವರ ಓಲ್ಡ್ ಎಂ.ಸಿ.ಸಿ’ ಕಾಂಕ್ರೀಟ್ ರಸ್ತೆ, ಇಂಟರ್‌ಲಾಕ್ ಮತ್ತು ಚರಂಡಿ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದ್ದು, ಇದೀಗ ಮೊದಲ ಮಾನ್ಸೂನ್ ಮಳೆಗೆ ತನ್ನ ಅಸಲಿ ಬಣ್ಣವನ್ನು ಹೊರಹಾಕಿದೆ.
​ಕಾಮಗಾರಿ ಮುಗಿದು ಕೇವಲ 6 ತಿಂಗಳು ಕಳೆಯುವಷ್ಟರಲ್ಲೇ ರಸ್ತೆಯ ಕಾಂಕ್ರೀಟ್ ಜಲ್ಲಿಕಲ್ಲುಗಳು ಸಂಪೂರ್ಣವಾಗಿ ಕೊಚ್ಚಿಹೋಗಿವೆ. ಚರಂಡಿಯ ಅಕ್ಕಪಕ್ಕದ ಭಾಗಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ರಸ್ತೆ ಯಾವುದೇ ಕ್ಷಣದಲ್ಲೂ ಕುಸಿಯುವ ಭೀತಿಯಲ್ಲಿದೆ. ಈ ಅವ್ಯವಸ್ಥೆಯನ್ನು ಕಂಡು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುತ್ತಿಗೆದಾರರು ನಡೆಸಿದ ಕಳಪೆ ಕಾಮಗಾರಿಯನ್ನು ಕಂಡೂ ಕಾಣದಂತೆ ವರ್ತಿಸುತ್ತಿರುವ ಸಂಬಂಧಪಟ್ಟ ಇಂಜಿನಿಯರ್‌ಗಳ ವೈಫಲ್ಯವೇ ಈ ದುಸ್ಥಿತಿಗೆ ಕಾರಣ ಎಂದು ಆರೋಪಿಸಲಾಗಿದೆ. “ಕೋಟಿಗಟ್ಟಲೆ ಹಣವನ್ನು ಯೋಜನೆಗಳಿಗೆ ಮೀಸಲಿಟ್ಟರೂ, ಗುತ್ತಿಗೆದಾರರು ಮತ್ತು ಇಂಜಿನಿಯರ್‌ಗಳ ಶಾಮೀಲಾತಿಯಿಂದಾಗಿ ಕೆಲಸಗಳು ಕೇವಲ ಲಕ್ಷದ ಅಳತೆಯಲ್ಲಿ ನಡೆಯುತ್ತಿವೆ. ಇದು ಸಾರ್ವಜನಿಕರನ್ನು ಅಪಾಯದ ಅಂಚಿಗೆ ತಳ್ಳುತ್ತಿದ್ದು, ಪ್ರಯಾಣಿಕರ ಜೀವದೊಂದಿಗೆ ಚೆಲ್ಲಾಟವಾಡಲಾಗುತ್ತಿದೆ” ಎಂದು ಸ್ಥಳೀಯರು ಕಿಡಿಕಾರಿದ್ದಾರೆ.

​ಕೆಲವೇ ತಿಂಗಳುಗಳಲ್ಲಿ ರಸ್ತೆ ಈ ಮಟ್ಟಿಗೆ ಹಾಳಾಗಿರುವುದು ಯೋಜನೆಯ ಪಾರದರ್ಶಕತೆಯನ್ನು ಪ್ರಶ್ನಿಸುವಂತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು, ತನಿಖೆ ನಡೆಸಿ ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!