ದ.ಕ. ಜಿಲ್ಲೆಯ ವಿವಿಧ ಗ್ರಾಪಂಗಳಲ್ಲಿ ಸಂಜೀವಿನಿ ಒಕ್ಕೂಟ ಗುತ್ತಿಗೆದಾರರ ಮೂಲಕ ದುಡಿಯುತ್ತಿರುವ ಸ್ವಚ್ಛತಾ ಪೌರಕಾರ್ಮಿಕರು ಡಿ.9ರಂದು ತಮ್ಮ ಕೆಲಸ ಸ್ಥಗಿತಗೊಳಿಸಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಲೇಡಿಹಿಲ್‌ನ ಪತ್ರಿಕಾ ಭವನದ ಬಳಿಯಿಂದ ಜಿಪಂ ತನಕ ಕಾಲ್ನಡಿಗೆ ಜಾಥಾ ನಡೆಸಲಿರುವರು ಎಂದು ದ.ಕ. ಜಿಲ್ಲಾ ಪೌರ ಕಾರ್ಮಿಕರ ಹಾಗೂ ನಾಲ್ಕನೇ ದರ್ಜೆ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಎಸ್.ಪಿ.ಆನಂದ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 10ಕ್ಕೆ ಕಾಲ್ನಡಿಗೆ ಜಾಥಾ ಮೂಲಕ ಸಾಗಿ ಪ್ರತಿಭಟನೆ ನಡೆಸಿದ ಬಳಿಕ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.ಸ್ವಚ್ಛತಾ ಪೌರಕಾರ್ಮಿಕರು 8 ವರ್ಷಗಳಿಂದ ಕನಿಷ್ಠ ವೇತನವಿಲ್ಲದೆ, ಇಎಸ್‌ಐ, ಪಿಎಫ್, ಮಾಸ್ಟ್, ಗೌಸ್, ಆರೋಗ್ಯ ಕಾರ್ಡ್, ವೈದ್ಯಕೀಯ ತಪಾಸಣೆ ಮತ್ತಿತರ ಸೌಭಲ್ಯಗಳಿಲ್ಲದೆ ದಿನಕ್ಕೆ ಕೇವಲ 300 ರೂ.ಗೆ ದುಡಿಯುತ್ತಿದ್ದಾರೆ. ಅವರಿಗೆ ತಿಂಗಳು ಪೂರ್ತಿ ಕೆಲಸ ನೀಡದೆ ನಿರಂತರ ಶೋಷಣೆ ಮತ್ತು ದಬ್ಬಾಳಿಕೆ ನಡೆಯುತ್ತಿದೆ ಎಂದು ಅವರು ಹೇಳಿದರು.
ಸ್ವಚ್ಛತಾ ಪೌರಕಾರ್ಮಿಕರು ಮತ್ತು ಸ್ವಚ್ಛತಾ ವಾಹನ ಚಾಲಕರನ್ನು ನೇರ ನೇಮಕಾತಿ, ನೇರ ಪಾವತಿ ಅಡಿಯಲ್ಲಿ ತಂದು ಅವರನ್ನು ಖಾಯಂ ಸ್ವಚ್ಛತಾ ಪೌರಕಾರ್ಮಿಕರಾಗಿ ಮತ್ತು ಸ್ವಚ್ಚತಾ ವಾಹನ ಚಾಲಕರನ್ನಾಗಿ ನೇಮಕ ಮಾಡಬೇಕು. ಸ್ವಚ್ಛತಾ ಪೌರಕಾರ್ಮಿಕರಿಗೆ ಮತ್ತು ಸ್ವಚ್ಛತಾ ವಾಹನ ಚಾಲಕರಿಗೆ ಸರಕಾರದ ಆದೇಶದಂತೆ ಎಲ್ಲ ಸವಲತ್ತುಗಳನ್ನು ನೀಡಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ , ಸಂಘದ ಸದಸ್ಯರಾದ ಪೌಲಿನ್ ಮೊಂತೆರೊ, ದೀಪ್ತಿ ಎಂ., ಹೇಮಾ ವಿ., ರೇಣುಕಾ ಮತ್ತು ವಿನೋಧಾ ಉಪಸ್ತಿತರಿದರು.