ರೈಲಿನಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆ: ಯುವಕ ಬಂಧನ

ಕಾಸರಗೋಡು: ರೈಲಿನಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಸಂದೇಶ ನೀಡಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಮಲಬಾರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಾಂಬ್ ಇಟ್ಟಿರುವುದಾಗಿ ಯುವಕ ಬೆದರಿಕೆ ಹಾಕಿದ್ದ.

ಬಂಧಿತನನ್ನು ಬಂಕಳಂ ನಿವಾಸಿ ರತೀಶ್ (42) ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಘಟನೆ ವೇಳೆ ಆತ ಮದ್ಯದ ಅಮಲಿನಲ್ಲಿದ್ದ ಎನ್ನಲಾಗಿದೆ.

ಬುಧವಾರ ರಾತ್ರಿ ಸುಮಾರು 7.30ರ ವೇಳೆಗೆ ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿದ್ದ ರತೀಶ್, ರೈಲಿನಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ್ದಾನೆ. ಮಾಹಿತಿ ಲಭಿಸಿದ ತಕ್ಷಣ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳವು ಕಾಞಂಗಾಡ್ ರೈಲು ನಿಲ್ದಾಣದಲ್ಲಿದ್ದ ವಿವಿಧ ರೈಲುಗಳಲ್ಲಿ ತಪಾಸಣೆ ನಡೆಸಿತು. ಆದರೆ, ಯಾವುದೇ ಬಾಂಬ್ ಅಥವಾ ಸ್ಫೋಟಕ ವಸ್ತು ಪತ್ತೆಯಾಗಲಿಲ್ಲ.

ನಂತರ ಮೊಬೈಲ್ ಫೋನ್‌ನ ಲೊಕೇಶನ್ ಆಧರಿಸಿ ಪೊಲೀಸರು ತನಿಖೆ ನಡೆಸಿದಾಗ ಆರೋಪಿ ಕಾಞಂಗಾಡ್ ಪ್ರದೇಶದಲ್ಲಿರುವುದು ಪತ್ತೆಯಾಯಿತು. ಕಾಞಂಗಾಡ್ ಡಿವೈಎಸ್‌ಪಿ ಅನಿಲ್ ಕುಮಾರ್ ಹಾಗೂ ಸಿಐ ದಿನೇಶ್ ಅವರ ನೇತೃತ್ವದಲ್ಲಿ ನಡೆದ ತನಿಖೆಯಲ್ಲಿ ಮಾವುಂಗಾಲ್ ಮೇಲ್ಸೇತುವೆಯ ಕೆಳಗಿನಿಂದ ಆರೋಪಿಯನ್ನು ಬಂಧಿಸಲಾಯಿತು.

ಬೀವರೆಜಸ್ ಅಂಗಡಿಯ ಸಮೀಪ ಜಾರ್ಖಂಡ್ ಮೂಲದ ಇಬ್ಬರು ಮಹಿಳೆಯರು ರೈಲು ನಿಲ್ದಾಣಕ್ಕೆ ಹೋಗುವ ದಾರಿ ಕೇಳಿದ್ದರು. ಅವರ ಬಳಿ ಬಾಂಬ್ ಇದೆ ಎಂದು ಅವರು ಹೇಳಿದ್ದರಿಂದ ರೈಲು ನಿಲ್ದಾಣ ಹಾಗೂ ಪೊಲೀಸ್ ಕಂಟ್ರೋಲ್ ರೂಮ್‌ಗೆ ಮಾಹಿತಿ ನೀಡಿದ್ದಾಗಿ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ.

ಆದರೆ, ವಿಚಾರಣೆ ವೇಳೆ ಆರೋಪಿ ನೀಡಿದ ಹೇಳಿಕೆ ಸುಳ್ಳು ಎಂಬುದು ಪೊಲೀಸರ ತನಿಖೆಯಲ್ಲಿ ಸ್ಪಷ್ಟವಾಗಿದೆ. ಬಂಧಿತ ಆರೋಪಿಗೆ ಬಳಿಕ ನೋಟಿಸ್ ನೀಡಿ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!