​ವಿದಾಯದ ಕಣ್ಣೀರು: ವಿಶೇಷ ಚೇತನರ ಪಾಲಿನ ‘ಗಿಫ್ಟ್’ ಆಗಿದ್ದ ರೂಪಾ ಟೀಚರ್ ಇನ್ನಿಲ್ಲ

​ಮಂಜೇಶ್ವರ: ಅವರ ಹೆಸರಲ್ಲೇ ಒಂದು ವಿಶಿಷ್ಟತೆ ಇತ್ತು, ಅವರ ನಗುವಿನಲ್ಲೇ ಒಂದು ಆತ್ಮೀಯತೆ ಇತ್ತು. ಮಂಜೇಶ್ವರ ಬಿ.ಆರ್.ಸಿ. ವ್ಯಾಪ್ತಿಯ ಸಾವಿರಾರು ವಿಶೇಷ ಚೇತನ ಮಕ್ಕಳ ಬಾಳಿಗೆ ಬೆಳಕಾಗಿದ್ದ, ಪ್ರೀತಿಯ ರೂಪಾ ರೋಯಲ್ ಗಿಫ್ಟ್ ಡಿ ಸೋಜ (44) ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ಮೀಯಪದವಿನ ಜನಪ್ರಿಯ ವ್ಯಕ್ತಿತ್ವ, ಚಲನಚಿತ್ರ ನಟ ಹಾಗೂ ನಾಟಕ ಕಲಾವಿದ ರಾಜೇಶ್ ಮೀಯಪದವು ಅವರ ಪತ್ನಿಯಾಗಿದ್ದ ರೂಪಾ ಟೀಚರ್, ಕೇವಲ ಒಬ್ಬ ಶಿಕ್ಷಕಿಯಷ್ಟೇ ಆಗಿರಲಿಲ್ಲ; ವಿಶೇಷ ಅಗತ್ಯವಿರುವ ಮಕ್ಕಳ ಪಾಲಿನ ತಾಯಿಯಾಗಿದ್ದರು.
​ಡಯಟ್ ಮಾಯಿಪ್ಪಾಡಿ ಮೂಲಕ ಕುಂಬಳೆ ಸರ್ಕಾರಿ ಪ್ರೌಢಶಾಲೆಯಲ್ಲಿ ವೃತ್ತಿ ಆರಂಭಿಸಿದ ಇವರು, ಬಳಿಕ ಮಂಜೇಶ್ವರ ಬಿ.ಆರ್.ಸಿ ಅಡಿಯಲ್ಲಿ ಕೊಡ್ಲಮೊಗರು ವಾಣೀ ವಿಜಯ ಪ್ರೌಢಶಾಲೆ, ಮೀಯಪದವು, ಮೂಡಂಬೈಲು ಹಾಗೂ ಕಡಂಬಾರು ಶಾಲೆಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದರು.

​ ತಮ್ಮ ಅದ್ಭುತ ವಾಗ್ಚಾತುರ್ಯ ಹಾಗೂ ಅಕ್ಕರೆಯ ಮನೋಭಾವದಿಂದ ಮಕ್ಕಳು ಮತ್ತು ಪೋಷಕರ ನೆಚ್ಚಿನ ಶಿಕ್ಷಕಿಯಾಗಿ ಗುರುತಿಸಿಕೊಂಡಿದ್ದರು.ಮೂಲತಃ ಉಳ್ಳಾಲ ಪೆರ್ಮನ್ನೂರಿನ ದಿವಂಗತ ಜೋಕಿಮ್ ಡಿ ಸೋಜ ಮತ್ತು ಆಗ್ನೆಸ್ ಡಿ ಸೋಜ ದಂಪತಿಯ ಪುತ್ರಿಯಾದ ಇವರು, 2006ರಲ್ಲಿ ವಿವಾಹವಾಗಿ ಮೀಯಪದವಿಗೆ ಬಂದಿದ್ದರು. ಮೀಯಪದವು ಚರ್ಚಿನ ವ್ಯಾಪ್ತಿಯಲ್ಲಿ ‘ಗುರಿಕಾರ್ತಿ’ಯಾಗಿ ಜವಾಬ್ದಾರಿ ನಿಭಾಯಿಸಿದ್ದ ಇವರು, ಸಂಘಟನಾ ಚತುರತೆ ಮತ್ತು ಕಾರ್ಯಕ್ರಮ ನಿರ್ವಾಹಕಿಯಾಗಿ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದರು.

ಕಳೆದ ಕೆಲವು ಸಮಯದಿಂದ ಅರ್ಬುದ (ಕ್ಯಾನ್ಸರ್) ರೋಗದೊಂದಿಗೆ ಮೌನ ಹೋರಾಟ ನಡೆಸುತ್ತಿದ್ದ ರೂಪಾ ಟೀಚರ್, ಸಾಕಷ್ಟು ಚಿಕಿತ್ಸೆ ಪಡೆದರೂ ವಿಧಿಯ ಆಟಕ್ಕೆ ಬಲಿಯಾಗಿದ್ದಾರೆ. ಸಾವಿನಲ್ಲೂ ಒಂದು ಸಾರ್ಥಕತೆ ಮೆರೆದ ಅವರ ಹೆಸರಿನಲ್ಲಿದ್ದ ‘ಗಿಫ್ಟ್’ ಎಂಬ ಪದದಂತೆ, ಅವರು ಭೇಟಿಯಾದ ಪ್ರತಿಯೊಬ್ಬರಿಗೂ ಪ್ರೀತಿಯ ಉಡುಗೊರೆಯನ್ನೇ ನೀಡಿದ್ದರು.

​”ವಿಶೇಷ ಚೇತನ ಮಕ್ಕಳ ಕಣ್ಣೀರೊರೆಸುತ್ತಿದ್ದ ಕೈಗಳು ಈಗ ಕಣ್ಮರೆಯಾಗಿವೆ. ಅವರ ಅಗಲಿಕೆಯಿಂದ ಕೇವಲ ಒಂದು ಕುಟುಂಬವಷ್ಟೇ ಅಲ್ಲ, ನೂರಾರು ಮಕ್ಕಳ ಬಾಳು ಅನಾಥವಾದಂತಾಗಿದೆ.”ಮೃತರು ಪತಿ ರಾಜೇಶ್ ಮೀಯಪದವು, ಇಬ್ಬರು ಮಕ್ಕಳು, ಇಬ್ಬರು ಸಹೋದರರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ರೂಪಾ ಟೀಚರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ

SHARE
Loading spinner

Leave a Reply

Your email address will not be published. Required fields are marked *

error: Content is protected !!