ಮಂಜೇಶ್ವರ: ಕೇರಳ ವಿಧಾನಸಭಾ ಚುನಾವಣೆಯ ಕಣ ರಂಗೇರುತ್ತಿರುವಂತೆಯೇ ಹೊರಬಿದ್ದಿರುವ ಮಲಯಾಳಂನ ಪ್ರಮುಖ ಐದು ಸುದ್ದಿವಾಹಿನಿಗಳ ಸಮೀಕ್ಷಾ ವರದಿಗಳು ಜಿಲ್ಲೆಯಲ್ಲಿ ಹಳೆ ಫಲಿತಾಂಶವೇ ಮರುಕಳಿಸುವ ಮುನ್ಸೂಚನೆ ನೀಡಿವೆ. ಏಶ್ಯಾನೆಟ್, ಮನೋರಮಾ, ಮಾತೃಭೂಮಿ, ಬಿಗ್ ಟಿವಿ ಮತ್ತು ರಿಪೋರ್ಟರ್ ಚಾನೆಲ್ಗಳ ಸಮೀಕ್ಷೆಯ ಪ್ರಕಾರ, ಜಿಲ್ಲೆಯ ಐದು ಕ್ಷೇತ್ರಗಳ ಪೈಕಿ ಎಡರಂಗ 3 ಮತ್ತು ಯುಡಿಎಫ್ 2 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಲಿವೆ.
ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಬದಲಾಗದ ಹವಾ!
ಎಲ್ಲರ ಕಣ್ಣು ನೆಟ್ಟಿರುವ ಮಂಜೇಶ್ವರ ಮತ್ತು ಕಾಸರಗೋಡು ಕ್ಷೇತ್ರಗಳಲ್ಲಿ ಈ ಬಾರಿಯೂ ಯಾವುದೇ ದೊಡ್ಡ ‘ಬುಡಮೇಲು’ ಸಾಧ್ಯತೆಗಳಿಲ್ಲ ಎಂದು ಸಮೀಕ್ಷೆಗಳು ಹೇಳಿವೆ.
ಬಿಜೆಪಿಯ ರಾಜ್ಯ ನಾಯಕ ಕೆ. ಸುರೇಂದ್ರನ್ ಅವರು ಈ ಬಾರಿಯೂ ಪ್ರಬಲ ಪೈಪೋಟಿ ನೀಡಲಿದ್ದರೂ, ಹಾಲಿ ಶಾಸಕ ಯುಡಿಎಫ್ನ ಎ.ಕೆ.ಎಂ ಅಶ್ರಫ್ ತಮ್ಮ ಕೋಟೆಯನ್ನು ಉಳಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. 2016 ಮತ್ತು 2021ರ ಅಲ್ಪ ಮತಗಳ ಸೋಲಿನ ಬಳಿಕ ಸುರೇಂದ್ರನ್ ಅವರಿಗೆ ಈ ಬಾರಿ ಮತದಾರರ ಪಟ್ಟಿ ಪರಿಷ್ಕರಣೆ ಲಾಭವಾಗಲಿದೆಯೇ ಎಂಬ ಕುತೂಹಲವಿದ್ದರೂ, ಸಮೀಕ್ಷೆ ಮಾತ್ರ ಅಶ್ರಫ್ ಪರವಾಗಿದೆ.
ಬಿಜೆಪಿಯ ಎಂ.ಎಲ್ ಅಶ್ವಿನಿ ಮತ್ತು ಎಡ ಸ್ವತಂತ್ರ ಅಭ್ಯರ್ಥಿ ಶಾನವಾಸ್ ಪಾದೂರು ಅವರ ಸವಾಲನ್ನು ಮೀರಿ, ಯುಡಿಎಫ್ನ ಭದ್ರಕೋಟೆಯ ಮತಬಲದಿಂದ ಕಲ್ಲಟ್ರ ಮಾಹಿನ್ ಹಾಜಿ ಗೆಲುವಿನ ನಗೆ ಬೀರಲಿದ್ದಾರೆ ಎಂದು ವರದಿಗಳು ಹೇಳಿವೆ.
ಎಡರಂಗದ ಭದ್ರಕೋಟೆಗಳಿಗೆ ಧಕ್ಕೆಯಿಲ್ಲ ಉಳಿದ ಮೂರು ಕ್ಷೇತ್ರಗಳಲ್ಲಿ ಎಡರಂಗದ ಪಾರುಪತ್ಯ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ.
ಉದುಮದಲ್ಲಿ ಸಿ.ಎಚ್ ಕುಂಞಂಬು ಮುನ್ನಡೆ. ಕಾಞಂಗಾಡಿನಲ್ಲಿ ಗೋವಿಂದನ್ ಪಳ್ಳಿಕಾಪಿಲ್ ಜಯದ ಹಾದಿಯಲ್ಲಿ ಹಾಗೂ ತ್ರಿಕರಿಪುರ ವಿ.ಪಿ.ಪಿ ಮುಸ್ತಫ ಮುನ್ನಡೆಯಲ್ಲಿದ್ದರೂ, ಇಲ್ಲಿ ಪ್ರಬಲ ಪೈಪೋಟಿ ಎದುರಾಗಲಿದೆ ಎಂದು ಸಮೀಕ್ಷೆ ಎಚ್ಚರಿಸಿದೆ.
ಈ ಬಾರಿಯ ಚುನಾವಣೆ ನೂತನ ಮತದಾರರ ಪಟ್ಟಿಯ ಆಧಾರದಲ್ಲಿ ನಡೆಯುತ್ತಿರುವುದು ಅಭ್ಯರ್ಥಿಗಳಲ್ಲಿ ಎದೆಯಬಡಿತ ಹೆಚ್ಚಿಸಿದೆ. 2021ರ ಫಲಿತಾಂಶವೇ ಮರುಕಳಿಸುತ್ತದೆಯೇ ಅಥವಾ ಮತದಾರ ಕೊನೆಕ್ಷಣದಲ್ಲಿ ಮೌನ ಕ್ರಾಂತಿ ಮಾಡುತ್ತಾನೆಯೇ ಎಂಬುದು ಈಗಿನ ಮಿಲಿಯನ್ ಡಾಲರ್ ಪ್ರಶ್ನೆ