ಕಾಸರಗೋಡು: ನಿನ್ನೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಔದ್ಯೋಗಿಕ ಮಾಹಿತಿಯಂತೆ ಕಾಸರಗೋಡು ಜಿಲ್ಲೆಯಲ್ಲಿ 79. 11ಶೇ. ಮತದಾನವಾಗಿದೆ.ಐದು ವಿಧಾನಸಭಾ ಕ್ಷೇತ್ರಗಳ ಪೖಕಿ ಅತೀ ಹೆಚ್ಚು ಮತದಾನ ( 81.04 ಶೇ.) ಮಂಜೇಶ್ವರದಲ್ಲಿ ನಡೆದಿದ್ದು ಕುತೂಹಲ ಮೂಡಿಸಿದೆ. ಮಂಜೇಶ್ವರದ ಮತದಾನದ ಶೇಕಡಾವಾರು ಹೆಚ್ಚಳ ಯಾವ ಅಭ್ಯರ್ಥಿಗೆ ಅನುಕೂಲವಾಗಲಿದೆ ಎಂಬುದು ಕೌತುಕ ಮೂಡಿಸಿದೆ.
ಮಂಜೇಶ್ವರದಲ್ಲಿ 2011ರ ವಿಧಾನಸಭಾ ಚುನಾವಣೆಯಲ್ಲಿ 75.21 ಶೇ ಮತದಾನವಾಗಿತ್ತು. ತದನಂತರ ಬಿಜೆಪಿ ಕೇವಲ 89 ಮತಗಳ ಅಂತರದಲ್ಲಿ ಸೋಲುಂಡ 2016 ರ ಚುನಾವಣೆಯಲ್ಲಿ 76.33 ಶೇ. ಮತದಾನ ನಡೆದಿತ್ತು. ಬಳಿಕ 2021ರಲ್ಲಿ ನಡೆದ ಚುನಾವಣೆಯಲ್ಲಿ 77.77 ಶೇ ಮತದಾನವಾಗಿತ್ತು. ಇದೀಗ ಪರಿಷ್ಕೃತ ಮತದಾರರ ಪಟ್ಟಿಯಂತೆ ನಡೆದ 2026 ರ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಮಂಜೇಶ್ವರದ ಮತದಾನ 81.04 ಶೇ. ತಲುಪಿದೆ. ಇದು ಕಾಸರಗೋಡು ಜಿಲ್ಲೆಯಲ್ಲೇ ಅತ್ಯಧಿಕ ಮತದಾನವಾಗಿದೆ.
ಚುನಾವಣಾ ಆಯೋಗ ನೀಡಿದ ಕಟ್ಟಕಡೆಯ ಮಾಹಿತಿಯಂತೆ ಜಿಲ್ಲೆಯಲ್ಲಿ ಅತೀ ಕಡಿಮೆ ಮತದಾನ ಕಾಞಂಗಾಡಿನಲ್ಲಾಗಿದೆ. ಅಲ್ಲಿ 77.24 ಶೇ ಮತದಾನವಾಗಿದ್ದು, ಈ ಹಿಂದಿನ ಚುನಾವಣೆಗಿಂತ ಸುಧಾರಿಸಿದೆ. ಉಳಿದಂತೆ ಕಾಸರಗೋಡು(79.61 ಶೇ), ಉದುಮ 78.7 ಶೇ, ತ್ರಿಕರಿಪುರ 79.64 ಶೇ ಮತದಾನವಾಗಿದೆ.
ಮಂಜೇಶ್ವರದ ಮತದಾನದ ಏರಿಕೆ ಪ್ರಬಲ ಮೂರು ಆಭ್ಯರ್ಥಿಗಳಲ್ಲಿ ಗೆಲುವಿನ ಆಶಾಭಾವನೆಯ ಭರವಸೆ ಮೂಡಿಸಿದೆ.