ಮಂಜೇಶ್ವರಂ: ಶಾಲಾ ರಜೆ ಹಿನ್ನೆಲೆಯಲ್ಲಿ ದಿನವೂ ಸಾವಿರಾರು ಮಂದಿ ಪ್ರವಾಸಿಗರು ಹಾಗೂ ಕುಟುಂಬ ಸಮೇತವಾಗಿ ಮಂಜೇಶ್ವರಂ ಬೀಚ್‌ಗೆ ಭೇಟಿ ನೀಡುತ್ತಿರುವುದರಿಂದ, ಇಲ್ಲಿ ತಕ್ಷಣ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕೆಂಬ ಬೇಡಿಕೆ ವ್ಯಕ್ತವಾಗಿದೆ.
ಇತ್ತೀಚೆಗೆ ಸಮುದ್ರ ಅಲೆಯಲ್ಲಿ ಸಿಲುಕಿ ಮೃತಪಟ್ಟ 18 ವರ್ಷದ ಯುವಕನ ಘಟನೆ ಆತಂಕವನ್ನು ಹೆಚ್ಚಿಸಿದೆ. ಬೀಚ್ ಹಾಗೂ ಸಮುದ್ರ ತೀರ ಪ್ರದೇಶಗಳಲ್ಲಿ ಸಮರ್ಪಕ ಭದ್ರತಾ ವ್ಯವಸ್ಥೆಗಳ ಕೊರತೆ ಇದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸಮುದ್ರಕ್ಕೆ ಇಳಿಯುವವರಿಗೆ ಹಾಗೂ ಮಕ್ಕಳೊಂದಿಗೆ ಬರುವ ಕುಟುಂಬಗಳಿಗೆ ಸುರಕ್ಷತೆ ಒದಗಿಸಲು ಲೈಫ್‌ಗಾರ್ಡ್‌ಗಳು, ಪೊಲೀಸ್ ಸಾನ್ನಿಧ್ಯ, ಎಚ್ಚರಿಕಾ ಫಲಕಗಳು ಮತ್ತು ರಕ್ಷಣಾ ಸಾಧನಗಳನ್ನು ತಕ್ಷಣ ವ್ಯವಸ್ಥೆ ಮಾಡಬೇಕೆಂದು ಸ್ಥಳೀಯರು ಮತ್ತು ಪ್ರವಾಸಿಗರು ಒತ್ತಾಯಿಸಿದ್ದಾರೆ.

ರಜೆ ದಿನಗಳಲ್ಲಿ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ, ಅನಾಹುತಗಳನ್ನು ತಪ್ಪಿಸಲು ಸಂಬಂಧಿಸಿದ ಇಲಾಖೆಗಳು ಹಾಗೂ ಆಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಜನರು ಆಗ್ರಹಿಸಿದ್ದಾರೆ. ಜನರ ಜೀವ ಭದ್ರತೆಯನ್ನು ಗಂಭೀರವಾಗಿ ಪರಿಗಣಿಸಿ ಜನಪ್ರತಿನಿಧಿಗಳು ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಅವರು ತಿಳಿಸಿದ್ದಾರೆ.
ಮಂಜೇಶ್ವರಂ ಬೀಚ್ ಅನ್ನು ಹೆಚ್ಚು ಸುರಕ್ಷಿತ ಮತ್ತು ಕುಟುಂಬ ಸ್ನೇಹಿ ಪ್ರವಾಸಿ ತಾಣವನ್ನಾಗಿ ರೂಪಿಸಲು ಆಡಳಿತ ಮತ್ತು ಜನಪ್ರತಿನಿಧಿಗಳು ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.


