ಮಂಜೇಶ್ವರ: ಸೀತಾಂಗೋಳಿಯ ಮದ್ಯದಂಗಡಿಯ ಸಮೀಪ ಕೋಳಿ ಸಾಗಾಟ ಲಾರಿ ಚಾಲಕ ಶಫಾಯತ್ ಅವರನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣದ ಆರೋಪಿ ಶ್ರೀನಿವಾಸನನ್ನು ಪೊಲೀಸರು ಕೇವಲ 24 ಗಂಟೆಗಳಲ್ಲಿ ಬಂಧಿಸಿದ್ದಾರೆ. ಹಳೆ ದ್ವೇಷ ಹಾಗೂ ಕುಡಿದ ಮತ್ತಿನಲ್ಲಿ ನಡೆದ ಮಾತಿನ ಚಕಮಕಿಯೇ ಈ ಘೋರ ಕೃತ್ಯಕ್ಕೆ ಕಾರಣವೆಂದು ತಿಳಿದುಬಂದಿದೆ.
ಸೋಮವಾರ ಶಫಾಯತ್ ಮತ್ತು ತಂಡದ ನಡುವೆ ಮದ್ಯ ಸೇವಿಸುವಾಗ ಗಲಾಟೆ ನಡೆದಿತ್ತು. ಇದರ ಮುಂದುವರಿದ ಭಾಗವಾಗಿ ಮಂಗಳವಾರ ಮಧ್ಯಾಹ್ನ ಶಫಾಯತ್ ನಿರ್ಜನ ಕಟ್ಟಡದ ಹಿಂದೆ ಮದ್ಯ ಸೇವಿಸುತ್ತಿದ್ದಾಗ, ಆರೋಪಿ ಶ್ರೀನಿವಾಸ ವಾಗ್ವಾದಕ್ಕಿಳಿದು ಮರದ ಹಲಗೆಯಿಂದ ಆತನ ತಲೆಗೆ ಬಲವಾಗಿ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಶಫಾಯತ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಕುಂಬಳೆ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಸದ್ಯ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿಯು ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ತನಿಖೆ ಮುಂದುವರಿದಿದೆ.