ನಿಶ್ಚಿತಾರ್ಥಗೊಂಡಿದ್ದ ವರನ ಅಕಾಲಿಕ ನಿಧನದಿಂದ ಮನನೊಂದು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂಬಳೆ ಸಮೀಪದ ಕಿದೂರಿನಲ್ಲಿ ನಡೆದಿದೆ. ಮೃತ ಯುವತಿಯನ್ನು ಕಿದೂರು ನಿವಾಸಿ ಬಿ. ಜಯಾನಂದನ್ ಅವರ ಪುತ್ರಿ ಪ್ರಫುಲ್ಲ (26) ಎಂದು ಗುರುತಿಸಲಾಗಿದೆ.
ಈಕೆಗೆ ತಮಿಳುನಾಡು ಮೂಲದ ಮಣಿ (30) ಎಂಬುವವರೊಂದಿಗೆ ವಿವಾಹ ನಿಶ್ಚಯವಾಗಿತ್ತು.
ಕೆಲವು ದಿನಗಳ ಹಿಂದೆ ಸಂಭವಿಸಿದ ಭೀಕರ ಬೈಕ್ ಅಪಘಾತದಲ್ಲಿ ಮಣಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಭಾವಿ ಪತಿಯ ಅಗಲಿಕೆಯಿಂದ ಪ್ರಫುಲ್ಲಾ ತೀವ್ರ ಮಾನಸಿಕ ಆಘಾತ ಮತ್ತು ಖಿನ್ನತೆಗೆ ಒಳಗಾಗಿದ್ದರು ಎಂದು ಕುಟುಂಬದವರು ಹಾಗೂ ಸಂಬಂಧಿಕರು ತಿಳಿಸಿದ್ದಾರೆ.
ಭಾನುವಾರ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯೊಳಗಿನ ಅವಧಿಯಲ್ಲಿ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. ಮನೆಯ ಸದಸ್ಯರು ಸಂಬಂಧಿಕರ ವಿವಾಹ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಪ್ರಫುಲ್ಲಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಘಟನೆಯ ಮಾಹಿತಿ ತಿಳಿದು ಕುಂಬ್ಳೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಆತ್ಮಹತ್ಯೆಗೆ ಮುನ್ನ ಪ್ರಫುಲ್ಲಾ ಬರೆದಿದ್ದಾರೆ ಎನ್ನಲಾದ ಪತ್ರವೊಂದು ಪೊಲೀಸರಿಗೆ ಲಭ್ಯವಾಗಿದ್ದು, “ನನ್ನನ್ನು ಮಣಿಯನ್ನು ಹೂಳಲಾದ ಸ್ಥಳದಲ್ಲೇ ದಫನ ಮಾಡಬೇಕು” ಎಂದು ಭಾವನಾತ್ಮಕವಾಗಿ ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.
ಈ ಕುರಿತು ಎರಡೂ ಕುಟುಂಬಗಳ ಸದಸ್ಯರು ಚರ್ಚಿಸಿ ಅಂತ್ಯಸಂಸ್ಕಾರದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.