ಉಪ್ಪಳ: ಕೇರಳದಲ್ಲಿ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ, ಮಂಜೇಶ್ವರಂ ತಾಲೂಕು ಆಸ್ಪತ್ರೆಗೆ ₹10 ಲಕ್ಷ ಮೌಲ್ಯದ ಅತ್ಯಾಧುನಿಕ ಕ್ಯಾನ್ಸರ್ ಡಿಟೆಕ್ಷನ್ ಹಾರ್ಮೋನ್ ಯಂತ್ರವನ್ನು ಜಿಲ್ಲಾ ಪಂಚಾಯತ್ ಸದಸ್ಯೆ ಇರ್ಫಾನ ಇಕ್ಬಾಲ್ ಉಚಿತವಾಗಿ ನೀಡಿ ಮಾದರಿಯಾಗಿದ್ದಾರೆ.
ಈ ‘ಕ್ಲಿಯಾ ಮೈಂಡ್‌ರೈ CL990i’ ಆಧುನಿಕ ಯಂತ್ರದ ಮೂಲಕ ಥೈರಾಯ್ಡ್, ಗರ್ಭಧಾರಣೆ ಸಂಬಂಧಿತ ಹಾರ್ಮೋನ್ ಪರೀಕ್ಷೆಗಳು ಹಾಗೂ ವಿವಿಧ ಕ್ಯಾನ್ಸರ್ ಪರೀಕ್ಷೆಗಳನ್ನು ಕ್ಷಣಾರ್ಧದಲ್ಲಿ ನಡೆಸಬಹುದು. ಮಂಜೇಶ್ವರಂ ಕ್ಷೇತ್ರದಲ್ಲಿ ಇತ್ತೀಚೆಗೆ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಈ ಯಂತ್ರವನ್ನು ದೇಣಿಗೆಯಾಗಿ ನೀಡಲಾಗಿದೆ.
ಇರ್ಫಾನ ಇಕ್ಬಾಲ್ ಅವರ ನೇತೃತ್ವದಲ್ಲಿ ಉಪ್ಪಳದಲ್ಲಿ ಶೇಖ್ ಜಾಯಿದ್ ವೃದ್ಧಾಶ್ರಮವನ್ನು ಸ್ಥಾಪಿಸಿ, ಅನಾಥ ವೃದ್ಧರನ್ನು ಕಳೆದ ಎರಡು ವರ್ಷಗಳಿಂದ ಸಂರಕ್ಷಣೆ ಮಾಡುತ್ತಿರುವುದು ಗಮನಾರ್ಹವಾಗಿದೆ.
ಮಂಜೇಶ್ವರಂ ತಾಲುಕು ಆಸ್ಪತ್ರೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಬ್ಲಾಕ್ ಪಂಚಾಯತ್ ಸದಸ್ಯ ಸೈಫುಲ್ಲಾ ಹಾಗೂ ಮುಸ್ಲಿಂ ಲೀಗ್ ಮುಖಂಡ ಅಜ್ಹಿಜ್ ಮೇರಿಕ್ಕೆ ಯಂತ್ರವನ್ನು ಸ್ವೀಕರಿಸಿದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶಮೀನಾ ಟೀಚರ್ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.