ಮಂಜೇಶ್ವರ/ಮಲಪ್ಪುರಂ : ಮಲಪ್ಪುರಂ ಜಿಲ್ಲೆಯ ವಳಾಚೇರಿ ಕಂಜೀಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಮಂಜೇಶ್ವರ ವರ್ಕಾಡಿ ನಿವಾಸಿ ಅಬ್ಬಾಸ್ ಎಂಬವರ ಪುತ್ರ ಬದರುಲ್ ಅಫೀಸ್ (23) ಸಾವನ್ನಪ್ಪಿದ ದುರ್ದೈವಿ.
ಕುಟ್ಟಿಪುರಂನಿಂದ ಕೋಯಿಕ್ಕೋಡ್ಗೆ ಬೈಕ್ನಲ್ಲಿ ತೆರಳುತ್ತಿದ್ದಾಗ, ವಳಾಚೇರಿ ಸಿಐ ಕಚೇರಿಯ ಸಮೀಪದಲ್ಲಿ ಬೈಕ್ ನಿಯಂತ್ರಣ ತಪ್ಪಿ ಹೆದ್ದಾರಿಯ ಪಕ್ಕದ ಭಿತ್ತಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಬೈಕ್ ಹಲವು ಮೀಟರ್ ದೂರಕ್ಕೆ ಎಸೆಯಲ್ಪಟ್ಟಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ತಲೆಗೆ ತೀವ್ರ ಪೆಟ್ಟಾಗಿದ್ದ ಅಫೀಸ್ಗೆ ಆಂಬ್ಯುಲೆನ್ಸ್ ಸಿಬ್ಬಂದಿ ಪ್ರಥಮ ಚಿಕಿತ್ಸೆ ನೀಡಿ, ತಕ್ಷಣವೇ ವಳಾಚೇರಿಯ ನಡಕ್ಕಾವ್ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ.
ಮಲಪ್ಪುರಂನಲ್ಲಿ ಕೆಲಸ ಮಾಡುತ್ತಿದ್ದ ಅಫೀಸ್, ತನ್ನ ಸಂಬಂಧಿಕರ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಸ್ವಗ್ರಾಮಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.