ಉಪ್ಪಳ: ಮೀನು ಮಾರಾಟಗಾರ್ತಿಯಾದ ವೃದ್ಧ ಮಹಿಳೆ ನಡೆದು ಹೋಗುತ್ತಿರುವಾಗ ದಾರಿ ಅಡ್ಡಗಟ್ಟಿದ ದುಷ್ಕರ್ಮಿಗಳು ಕತ್ತಿ ತೋರಿಸಿ ಬೆದರಿಸಿ ಕುತ್ತಿಗೆಯಿಂದ ಚಿನ್ನದ ಸರ ಮತ್ತು ಕಿವಿಯಿಂದ ಬೆಂಡೋಲೆ ತೆಗೆದು ಪರಾರಿಯಾದ ಘಟನೆ ಇಂದು ಬೆಳಿಗ್ಗೆ ಉಪ್ಪಳ ಮಣಿಮುಂಡದಲ್ಲಿ ಸುಮಾರು 10 ಗಂಟೆಯ ವೇಳೆಗೆ ಈ ಘಟನೆ ನಡೆಯಿತು.ಮಣಿಮುಂಡದ ರೖಲ್ವೇ ಅಡಿಸೇತುವೆ ಬಳಿ ಘಟನೆ ನಡೆದಿದೆ.

ಉಪ್ಪಳ ಶಾರದಾ ನಗರ ನಿವಾಸಿ 60 ರ ಹರೆಯದ ಮೀನು ಮಾರಾಟ ಮಾಡುವ ಮಹಿಳೆ ಉಪ್ಪಳ ಮೀನು ಮಾರುಕಟ್ಟೆಯತ್ತ ನಡೆದು ಬರುವಾಗ ಹೊಂಚು ಹಾಕಿ ಕಾದಿದ್ದ ದುಷ್ಕರ್ಮಿಗಳು ದಿಢೀರನೆ ಎದುರಿಗೆ ಬಂದು ಕತ್ತಿ ತೋರಿಸಿ ಬೆದರಿಸಿ ಕೊರಳಿಂದ ಮತ್ತು ಕಿವಿಯ ಚಿನ್ನದ ಆಭರಣ ಕಳಚಿ ಕೊಂಡೊಯ್ದರು. ಬಳಿಕ ಭಯಾತಂಕಗೊಂಡ ಮಹಿಳೆ ಉಪ್ಪಳ ಮೀನು ಮಾರಾಟ ಕೇಂದ್ರಕ್ಕೆ ತಲುಪಿ ನಡೆದ ಘಟನೆ ಇತರರಲ್ಲಿ ಹೇಳಿದಾಗಲಷ್ಟೇ ವಿಷಯ ಬಹಿರಂಗವಾಗಿದೆ. ಅನಂತರ ಮಂಜೇಶ್ವರ ಪೊಲೀಸರು ಮಹಿಳೆಯ ಹೇಳಿಕೆ ದಾಖಲಿಸಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸ್ ಕಾರ್ಯಾಚರಣೆ ಆರಂಭಗೊಂಡಿದೆ.

ಒಂದು ವಾರದ ಹಿಂದೆಯಷ್ಟೇ ಹೊಸಂಗಡಿ ಸೇವಾ ರಸ್ತೆಯಲ್ಲಿ ಪಾದಾಚಾರಿ ಮಹಿಳೆಯಲ್ಲಿ ದಾರಿ ಕೇಳುವ ನೆಪದಲ್ಲಿ ಕೊರಳಿನಲ್ಲಿದ್ದ ಚಿನ್ನದ ಸರ ಅಪಹರಿಸಲಾಗಿತ್ತು. ಬೖಕಿನಲ್ಲಿ ಬಂದ ಇಬ್ಬರು ಈ ಕೃತ್ಯ ಎಸಗಿದ್ದು, ಈ ಪೖಕಿ ಕುಂಬಳೆ ಬಂಬ್ರಾಣ ನಿವಾಸಿ ಓರ್ವನನ್ನು ಬಂಧಿಸಲಾಗಿದೆ.

