ಮಂಜೇಶ್ವರ : ಗಡಿ ಪ್ರದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಕುಂಜತ್ತೂರು ಹಾಗೂ ಹೊಸಂಗಡಿ ಪೀಸ್ ಕ್ರಿಯೇಟಿವ್ ಕೇಂದ್ರೀಯ ಶಾಲೆಗಳಲ್ಲಿ ಅತ್ಯಂತ ವಿಜೃಂಭಣೆಯಿಂದ ವಿದ್ಯಾರ್ಥಿ ಸಂಸತ್ತಿನ ಪದಗ್ರಹಣ ಸಮಾರಂಭ ಹಾಗೂ ಶಿಕ್ಷಕರು ಹಾಗೂ ಸಿಬ್ಬಂದಿಗಳಿಗೆ ಸನ್ಮಾನ ಸಮಾರಂಭ ಜರುಗಿತು.
ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣವನ್ನು ಬೆಳೆಸುವ ಮತ್ತು ಗುರುಹಿರಿಯರಿಗೆ ಗೌರವ ಸಲ್ಲಿಸುವ ಉದಾತ್ತ ಉದ್ದೇಶವನ್ನು ಹೊಂದಿತ್ತು.
ಶಾಲೆಯ ನೂತನ ವಿದ್ಯಾರ್ಥಿ ನಾಯಕ, ನಾಯಕಿಯರು ಮತ್ತು ವಿವಿಧ ವಿಭಾಗಗಳ ಪದಾಧಿಕಾರಿಗಳಿಗೆ ಶಾಲಾ ಆಡಳಿತ ಮಂಡಳಿಯು ಗೌರವಯುತವಾಗಿ ಬಾವುಟ ಮತ್ತು ಪದಕಗಳನ್ನು ನೀಡಿ ಗೌರವಿಸಿತು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಂಶುಪಾಲ ಅಬ್ದುಲ್ ಖಾದರ್ ( byt1): ವಿದ್ಯಾರ್ಥಿ ನಾಯಕತ್ವ ಮತ್ತು ಶಿಕ್ಷಕರ ಮೇಲಿನ ಗೌರವ ಎರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇಂತಹ ಕಾರ್ಯಕ್ರಮಗಳು ಶಾಲೆಯಲ್ಲಿ ಆರೋಗ್ಯಕರ ವಾತಾವರಣವನ್ನು ನಿರ್ಮಿಸುತ್ತವೆ” ಎಂದು ಸಂತಸ ವ್ಯಕ್ತಪಡಿಸಿದರು.




ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ನಾಯಕರು ತಮ್ಮ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುವುದಾಗಿ ಈ ಸಂದರ್ಭದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಶ್ರಮಿಸುತ್ತಿರುವ ಶಿಕ್ಷಕ ಹಾಗೂ ಸಿಬ್ಬಂದಿ ವೃಂದವನ್ನು ಈ ಸಮಾರಂಭದಲ್ಲಿ ಶಾಲಾ ಚೇಯರ್ಮ್ಯಾನ್ ಹಾಜಿ ಅಬ್ದುಲ್ ರಹ್ಮಾನ್ ಅರಿಮಲ, ಪ್ರಾಂಶುಪಾಲ ಅಬ್ದುಲ್ ಖಾದರ್, ಸಹಾಯಕ ಪ್ರಾಂಶುಪಾಲ ಇಜಾಝ್ ಹಾಗೂ ಕೋರ್ಡಿನೇಟರುಗಳ ಸಮ್ಮುಖದಲ್ಲಿ ವಿಶೇಷವಾಗಿ ಸನ್ಮಾನಿಸಲಾಯಿತು. ಶಿಕ್ಷಕರ ನಿರಂತರ ಪ್ರಯತ್ನ ಮತ್ತು ಬೋಧನೆಯಿಂದಾಗಿ ಶಾಲೆಯು ಸಾಧಿಸುತ್ತಿರುವ ಪ್ರಗತಿಯನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.
ಬಳಿಕ ವಿದ್ಯಾರ್ಥಿ ಪದಾಧಿಕಾರಿಗಳಿಂದ ಶಿಸ್ತು ಮತ್ತು ಬದ್ಧತೆಯ ಪ್ರತಿಜ್ಞೆ ನಡೆಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತ ಮಂಡಳಿಯ ಸದಸ್ಯರು, ಪೋಷಕರು, ಶಿಕ್ಷಕರು ಮತ್ತು ಎಲ್ಲಾ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ರಾಷ್ಟ್ರಗೀತೆಯೊಂದಿಗೆ ಸಮಾರಂಭವು ಸಂಪನ್ನಗೊಂಡಿತು


