ಕುಂಬಳೆ ಪಂಚಾಯತ್ ವಿರುದ್ಧ ವ್ಯಾಪಾರಿಗಳ ಹೋರಾಟ; ಜು. 6ರಂದು ಪಂಚಾಯತ್ ಕಚೇರಿಗೆ ಪ್ರತಿಭಟನಾ ಮೆರವಣಿಗೆ

ಪಟ್ಟಣದ ಮೂಲಸೌಕರ್ಯ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹ; ಬೇಡಿಕೆ ಈಡೇರದಿದ್ದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ

ಕುಂಬಳೆ, ಜು. 2: ಕುಂಬಳೆ ಪಟ್ಟಣದ ವಿವಿಧ ಸಮಸ್ಯೆಗಳ ಕುರಿತು ಪಂಚಾಯತ್ ಹಾಗೂ ಪೊಲೀಸ್ ಇಲಾಖೆಯ ನಿರ್ಲಕ್ಷ್ಯವನ್ನು ಖಂಡಿಸಿ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಕುಂಬಳೆ ಘಟಕ ಹಾಗೂ ಮರ್ಚೆಂಟ್ ಯೂತ್ ವಿಂಗ್ ಜುಲೈ 6ರಂದು ಕುಂಬಳೆ ಪಂಚಾಯತ್ ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ಘೋಷಿಸಿವೆ.

ಕುಂಬಳೆಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದ ಸಂಘಟನೆಯ ಪದಾಧಿಕಾರಿಗಳು, ಬೆಳಿಗ್ಗೆ 10 ಗಂಟೆಗೆ ಆರಂಭವಾಗುವ ಪ್ರತಿಭಟನಾ ಮೆರವಣಿಗೆಯನ್ನು ಸಂಘಟನೆಯ ರಾಜ್ಯ ಉಪಾಧ್ಯಕ್ಷ ಕೆ. ಅಹ್ಮದ್ ಶರೀಫ್ ಉದ್ಘಾಟಿಸಲಿದ್ದು, ಘಟಕದ ಅಧ್ಯಕ್ಷ ರಾಜೇಶ್ ಮನಯತ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.

ಬದಿಯಡ್ಕ ಭಾಗದಿಂದ ಕುಂಬಳೆಗೆ ಬರುವ ಪ್ರಯಾಣಿಕರನ್ನು ಮಧ್ಯದಲ್ಲೇ ಇಳಿಸಿ ಬಸ್‌ಗಳನ್ನು ಸಂಚರಿಸಲಾಗುತ್ತಿರುವುದರಿಂದ ಪ್ರಯಾಣಿಕರು ಹಾಗೂ ವ್ಯಾಪಾರಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಈ ಬಗ್ಗೆ ಟ್ರಾಫಿಕ್ ರೆಗ್ಯುಲೇಟರಿ ಸಮಿತಿ ಹಾಗೂ ಪಂಚಾಯತ್ ಈಗಾಗಲೇ ನಿರ್ಧಾರ ಕೈಗೊಂಡಿದ್ದರೂ ಅದನ್ನು ಜಾರಿಗೊಳಿಸಿಲ್ಲ ಎಂದು ಸಂಘಟನೆ ಆರೋಪಿಸಿದೆ.

ಹೋಟೆಲ್ ಅಂಡ್ ರೆಸ್ಟೋರೆಂಟ್ ಅಸೋಸಿಯೇಷನ್, ಕೇರಳ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್, ಆಲ್ ಕೇರಳ ಗೋಲ್ಡ್ ಆ್ಯಂಡ್ ಸಿಲ್ವರ್ ಮರ್ಚೆಂಟ್ಸ್ ಅಸೋಸಿಯೇಷನ್ ಹಾಗೂ ಕೇರಳ ಸ್ಟೇಟ್ ಬಾರ್ಬರ್ಸ್ ಅಸೋಸಿಯೇಷನ್ ಸಹಯೋಗದೊಂದಿಗೆ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಲಾಗಿದೆ.

ಪ್ರತಿಭಟನಾಕಾರರು ಬದಿಯಡ್ಕ ಮಾರ್ಗದ ಪ್ರಯಾಣಿಕರನ್ನು ಮಧ್ಯದಲ್ಲೇ ಇಳಿಸುವ ಪದ್ಧತಿಯನ್ನು ತಕ್ಷಣ ನಿಲ್ಲಿಸಬೇಕು, ಹಳೆಯ ಬಸ್ ನಿಲ್ದಾಣವನ್ನು ಸಾರ್ವಜನಿಕರ ಬಳಕೆಗೆ ತೆರೆಯಬೇಕು, ದುಸ್ಥಿತಿಯಲ್ಲಿರುವ ಕುಂಬಳೆ ಬಸ್ ನಿಲ್ದಾಣವನ್ನು ಅದೇ ಸ್ಥಳದಲ್ಲಿ ಮರುನಿರ್ಮಿಸಿ ಸ್ಥಳಾಂತರಗೊಂಡ ವ್ಯಾಪಾರಿಗಳಿಗೆ ಪುನರ್ವಸತಿ ಕಲ್ಪಿಸಬೇಕು, ವ್ಯಾಪಾರಕ್ಕೆ ಅಡ್ಡಿಯಾಗುವ ರೀತಿಯಲ್ಲಿ ವಾಹನ ನಿಲುಗಡೆ ಮಾಡುವ ಆಟೋಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಆಟೋಗಳಿಗೆ ಪಂಚಾಯತ್ ನೋಂದಣಿ ಕಡ್ಡಾಯಗೊಳಿಸಬೇಕು, ಖಾಸಗಿ ವಾಹನಗಳಿಗೆ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ ಸಮಯ ಮಿತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದಲ್ಲದೆ, ‘ಟೇಕ್ ಎ ಬ್ರೇಕ್’ ಸೌಲಭ್ಯ ಮತ್ತು ಮೀನು ಮಾರುಕಟ್ಟೆಯನ್ನು ಪುನರಾರಂಭಿಸಬೇಕು, ಕೆಎಸ್‌ಟಿಪಿ ಅರ್ಧದಲ್ಲೇ ಸ್ಥಗಿತಗೊಂಡಿರುವ ಕುಂಬಳೆ ಸೌಂದರ್ಯೀಕರಣ ಕಾಮಗಾರಿಯನ್ನು ಪೂರ್ಣಗೊಳಿಸಬೇಕು, ರಾಷ್ಟ್ರೀಯ ಹೆದ್ದಾರಿಯಿಂದ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ತೆರೆಯಬೇಕು, ಅಪಘಾತ ಸಂಭವಿಸುವ ಪ್ರದೇಶಗಳಲ್ಲಿ ಸ್ಪೀಡ್ ಬ್ರೇಕರ್‌ಗಳನ್ನು ನಿರ್ಮಿಸಬೇಕು, ಸಾರ್ವಜನಿಕ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು, ವ್ಯಾಪಾರಿಗಳನ್ನು ಬೆದರಿಸುವ ಉದ್ದೇಶದಿಂದ ಸುಳ್ಳು ದೂರುಗಳು ಹಾಗೂ ಮಾಹಿತಿ ಹಕ್ಕು ಅರ್ಜಿಗಳನ್ನು ಸಲ್ಲಿಸುವವರ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಕುಂಬಳೆ–ಬದಿಯಡ್ಕ–ಮುಳ್ಳೇರಿಯ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸೇವೆ ಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರತಿಭಟನೆಯ ದಿನ ಬೆಳಗ್ಗೆಯಿಂದ ಪ್ರತಿಭಟನೆ ಮುಕ್ತಾಯವಾಗುವವರೆಗೆ ಕುಂಬಳೆಯಲ್ಲಿನ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಲಾಗುವುದು. ಬೇಡಿಕೆಗಳಿಗೆ ಅಧಿಕಾರಿಗಳು ಸ್ಪಂದಿಸದಿದ್ದರೆ ಎರಡನೇ ಹಂತವಾಗಿ ಕುಂಬಳೆ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ವ್ಯಾಪಾರಿ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಕುಂಬಳೆ ಘಟಕದ ಅಧ್ಯಕ್ಷ ರಾಜೇಶ್ ಮನಯತ್, ಪ್ರಧಾನ ಕಾರ್ಯದರ್ಶಿ ಸತ್ತಾರ್ ಆರಿಕ್ಕಾಡಿ, ಖಜಾಂಚಿ ಅನ್ವರ್ ಸಿಟಿ, ಮರ್ಚೆಂಟ್ ಯೂತ್ ವಿಂಗ್ ಅಧ್ಯಕ್ಷ ಅಶ್ರಫ್ ಸ್ಕೈಲರ್, ಪ್ರಧಾನ ಕಾರ್ಯದರ್ಶಿ ಹೈದರ್ ಕ್ಲಿಯರ್‌ಲೈಟ್ ಹಾಗೂ ಖಜಾಂಚಿ ಸಿದ್ದೀಕ್ ಮುಬಾರಕ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!