ಮಂಜೇಶ್ವರ : ಅತಿವೃಷ್ಟಿ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಕುಂಬಳೆ ಪಂಚಾಯತ್ ವ್ಯಾಪ್ತಿಯಲ್ಲಿ ಎರಡು ಮನೆಗಳು ಭಾಗಶಃ ಜಖಂಗೊಂಡಿವೆ. ಕುಂಬಳೆಯ 12ನೇ ವಾರ್ಡ್ನ ಕೋಟೇಕಾರಿನಲ್ಲಿ ರಾಧಾಕೃಷ್ಣ ಪೂಜಾರಿ ಅವರ ಮನೆಯ ಮೇಲೆ ತೆಂಗಿನ ಮರ ಬಿದ್ದ ಪರಿಣಾಮ ಮನೆಗೆ ಹಾನಿಯಾಗಿದೆ.
ಅದೃಷ್ಟವಶಾತ್ ಮನೆಯಲ್ಲಿದ್ದವರು ಕೂಡಲೇ ಹೊರಗೋಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಲ್ಲದೆ, 24ನೇ ವಾರ್ಡ್ನ ಶೇಡಿಕಾವಿನಲ್ಲಿ ಮುತ್ತುಕೋಯ ತಂಗಲ್ ಅವರ ಹೆಂಚು ಹಾಕಿದ ಮನೆಯ ಮೇಲೆ ಪಕ್ಕದ ಮರ ಬಿದ್ದು ಮೇಲ್ಛಾವಣಿ ಧ್ವಂಸಗೊಂಡಿದೆ.
ಸದ್ದು ಕೇಳಿ ಮನೆಯವರು ಹೊರಬಂದಿದ್ದರಿಂದ ದೊಡ್ಡ ಅಪಾಯ ತಪ್ಪಿದೆ. ಪ್ರದೇಶದಲ್ಲಿ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆ ಮತ್ತು ಬೀಸುತ್ತಿರುವ ಬಿರುಗಾಳಿಯಿಂದಾಗಿ ಕೃಷಿ ನಾಶವಾಗಿದ್ದು, ವಿದ್ಯುತ್ ಸಂಪರ್ಕವೂ ಕಡಿತಗೊಂಡಿದೆ.
ಸ್ಥಳೀಯರು ಮಳೆ ಮತ್ತು ಗಾಳಿಯ ಆರ್ಭಟಕ್ಕೆ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ


