ಕಾಸರಗೋಡು: ಎಟಿಎಂ ಕೇಂದ್ರದ ಗಾಜಿನ ಬಾಗಿಲು ಮೈಮೇಲೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಕಾಸರಗೋಡು ಜಿಲ್ಲೆಯ ಕಾಂಞಂಗಾಡ್ ಮೂಲದ ಬ್ಯಾಂಕ್ ಉದ್ಯೋಗಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಕಾಂಞಂಗಾಡ್ ನಿತ್ಯಾನಂದ ಆಶ್ರಮದ ಸಮೀಪದ ನಿವಾಸಿ ಬಾಲಕೃಷ್ಣ (56) ಮೃತ ದುರ್ದೈವಿ. ಇವರು ಮಂಗಳೂರಿನ ಕರ್ನಾಟಕ ಕೋ-ಆಪರೇಟಿವ್ ಬ್ಯಾಂಕ್ ಶಾಖೆಯಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದರು.
ಬಾಲಕೃಷ್ಣ ಅವರು ವಾರದಲ್ಲಿ ಒಂದು ದಿನ ಮಾತ್ರ ಕಾಂಞಂಗಾಡ್‌ಗೆ ತೆರಳುತ್ತಿದ್ದು, ಉಳಿದ ದಿನಗಳಲ್ಲಿ ಮಂಗಳೂರಿನಲ್ಲೇ ವಾಸ್ತವ್ಯ ಹೂಡುತ್ತಿದ್ದರು.

ಕೆಲಸ ಮುಗಿಸಿ ಮನೆಗೆ ತೆರಳುವ ಮುನ್ನ ಬ್ಯಾಂಕ್ ಸಮೀಪದ ಎಟಿಎಂ ಕೇಂದ್ರಕ್ಕೆ ಪ್ರವೇಶಿಸಿದ್ದರು. ಈ ವೇಳೆ ಕಾಲು ಜಾರಿ ಬಿದ್ದಿದ್ದರಿಂದ ಎಟಿಎಂನ ಗಾಜಿನ ಬಾಗಿಲು ಪುಡಿಯಾಗಿ ಬಾಲಕೃಷ್ಣ ಅವರ ಮೇಲೆ ಬಿದ್ದಿದೆ.
ಅತಿಯಾದ ರಕ್ತಸ್ರಾವದಿಂದ ಬಳಲುತ್ತಿದ್ದ ಅವರನ್ನು ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕಾಂಞಂಗಾಡ್‌ಗೆ ಕೊಂಡೊಯ್ಯಲಾಗುತ್ತದೆ.


