ಮಂಜೇಶ್ವರ: ಸಮಾಜದ ಏಳಿಗೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಮಹಾನ್ ವ್ಯಕ್ತಿಗಳನ್ನು ಗೌರವಿಸುವ ಮತ್ತು ಅವರ ಸೇವೆಯ ಮಹತ್ವವನ್ನು ತಿಳಿಸುವ ಉದ್ದೇಶದಿಂದ, ಕುಂಜತ್ತೂರಿನ ಪೀಸ್ ಕ್ರಿಯೇಟಿವ್ ಆಂಗ್ಲ ಮಾಧ್ಯಮ ಕೇಂದ್ರೀಯ ಶಾಲೆಯ ಕೆ.ಜಿ. ವಿಭಾಗದ ವತಿಯಿಂದ ವಿನೂತನ ‘ಕಮ್ಯುನಿಟಿ ಹೆಲ್ಪರ್ಸ್ ಡೇ’ ಸಮುದಾಯ ಸೇವಕರ ದಿನ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.



ಕಾರ್ಯಕ್ರಮದಲ್ಲಿ ಶಾಲೆಯ ಪುಟಾಣಿ ವಿದ್ಯಾರ್ಥಿಗಳು ವೈದ್ಯರು, ಪೊಲೀಸರು, ರೈತರು, ಅಗ್ನಿಶಾಮಕ ದಳದ ಸಿಬ್ಬಂದಿ, ಶಿಕ್ಷಕರು ಮತ್ತು ಸಮಾಜದ ಇತರ ವಿವಿಧ ವಲಯಗಳ ಸೇವಕರ ವೇಷಭೂಷಣಗಳನ್ನು ಧರಿಸಿ ಪಾತ್ರಗಳನ್ನು ನಿರ್ವಹಿಸಿದರು.
ಪ್ರತಿಯೊಬ್ಬ ವಿದ್ಯಾರ್ಥಿಯೂ ತಾವು ಧರಿಸಿದ್ದ ವೃತ್ತಿಯ ಮಹತ್ವ ಮತ್ತು ಅವರು ಸಮಾಜಕ್ಕೆ ನೀಡುವ ಕೊಡುಗೆಯನ್ನು ಅತಿ ಸುಂದರವಾಗಿ ಪ್ರದರ್ಶಿಸಿದರು. ಪುಟ್ಟ ಮಕ್ಕಳ ಈ ಅಭಿನಯವು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಶಾಲಾ ಪ್ರಾಂಶುಪಾಲ ಅಬ್ದುಲ್ ಖಾದರ್ ರವರ ನೇತೃತ್ವದಲ್ಲಿ ನಡೆದ ಕಾರ್ಯಕರ್ಮಕ್ರಮಕ್ಕೆ ಶಾಲೆಯ ಅಧ್ಯಾಪಕರುಗಳು ವಿದ್ಯಾರ್ಥಿಗಳಿಗೆ ಆಯಾ ವೃತ್ತಿಯ ಬಗ್ಗೆ ಸೂಕ್ತ ಮಾರ್ಗದರ್ಶನ ಮತ್ತು ಪ್ರೋತ್ಸಾಹವನ್ನು ನೀಡಿದರು. ಮಕ್ಕಳ ಈ ಉತ್ಸಾಹದಾಯಕ ಪ್ರದರ್ಶನವು ಪೋಷಕರು ಮತ್ತು ಶಿಕ್ಷಕರಿಗೆ ಸಂತಸ ಮೂಡಿಸಿತು


