ಉಡುಪಿ | ಜು. 9: ಮುಂದಿನ ಹತ್ತು ವರ್ಷಗಳ ಅವಧಿಗೆ ಉಡುಪಿಯ ಸಮಗ್ರ ಅಭಿವೃದ್ಧಿಯ ನೀಲನಕ್ಷೆ ರೂಪಿಸುವ ಉದ್ದೇಶದಿಂದ ‘ಉಡುಪಿ ವಿಷನ್-2035’ ಸಮಾಲೋಚನಾ ಸಭೆಯನ್ನು ಜುಲೈ 12ರಂದು ಸಂಜೆ 5.30ಕ್ಕೆ ಉಡುಪಿಯ ಹೊಟೇಲ್ ಕಿದಿಯೂರಿನ ಶೇಷಶಯನ್ ಹಾಲ್‌ನಲ್ಲಿ ಆಯೋಜಿಸಲಾಗಿದೆ ಎಂದು ಉಡುಪಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಅಧ್ಯಕ್ಷ ಅಮ್ಮುಂಜೆ ಪ್ರಭಾಕರ ನಾಯಕ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಸಂಘಟನೆಗಳು, ಜನಪ್ರತಿನಿಧಿಗಳು ಹಾಗೂ ವಿವಿಧ ಕ್ಷೇತ್ರಗಳ ಪರಿಣಿತರು ಸಭೆಯಲ್ಲಿ ಭಾಗವಹಿಸಿ ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದ ತಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನು ಮಂಡಿಸಲಿದ್ದಾರೆ. ಮುಂದಿನ ಹತ್ತು ವರ್ಷಗಳಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಅಗತ್ಯವಿರುವ ಯೋಜನೆಗಳ ಸಾಧ್ಯತೆಗಳ ಕುರಿತು ಸಮಗ್ರ ಚರ್ಚೆ ನಡೆಸಲಾಗುವುದು ಎಂದರು.

ಉಡುಪಿ ಚೇಂಬರ್ ಆಫ್ ಕಾಮರ್ಸ್ ಪ್ರಧಾನ ಕಾರ್ಯದರ್ಶಿ ಡಾ. ವಿಜಯೇಂದ್ರ ಮಾತನಾಡಿ, ಈ ಹಿಂದೆ ಜಿಲ್ಲಾಧಿಕಾರಿಗಳಾಗಿದ್ದ ಪೊನ್ನುರಾಜ್ ಹಾಗೂ ರೇಜು ಅವರ ಅವಧಿಯಲ್ಲೂ ‘ಉಡುಪಿ ವಿಷನ್’ ಕುರಿತು ಚರ್ಚೆಗಳು ನಡೆದಿದ್ದರೂ, ಅವು ನಿರೀಕ್ಷಿತ ಮಟ್ಟದಲ್ಲಿ ಅನುಷ್ಠಾನಗೊಂಡಿರಲಿಲ್ಲ. ಈ ಬಾರಿ ನಿರ್ದಿಷ್ಟ ಕಾರ್ಯಯೋಜನೆಗಳೊಂದಿಗೆ ಮುಂದುವರಿಯುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ಈ ಸಮಾಲೋಚನಾ ಸಭೆಯಲ್ಲಿ ಚೇಂಬರ್ ಆಫ್ ಕಾಮರ್ಸ್ ಜೊತೆಗೆ ಸಿವಿಲ್ ಇಂಜಿನಿಯರ್ಸ್, ಚಾರ್ಟರ್ಡ್ ಅಕೌಂಟೆಂಟ್ಸ್, ಜುವೆಲ್ಲರ್ಸ್, ಬಿಲ್ಡರ್ಸ್, ಹೊಟೇಲಿಯರ್ಸ್ ಸೇರಿದಂತೆ ವಿವಿಧ ವೃತ್ತಿಪರ ಸಂಘಟನೆಗಳು ಭಾಗವಹಿಸಲಿವೆ. ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ತಮ್ಮ ಅಭಿಪ್ರಾಯಗಳನ್ನು ಮಂಡಿಸಲಿದ್ದಾರೆ.
ಸಭೆಯಲ್ಲಿ ಜಿಲ್ಲೆಯ ಎಲ್ಲಾ ಶಾಸಕರು, ಸಂಸದರು ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಡಾ. ವಿಜಯೇಂದ್ರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಚೇಂಬರ್‌ನ ಉಪಾಧ್ಯಕ್ಷ ಪಿ. ನಟರಾಜ ಪ್ರಭು, ಅನಿಶ್ ಪೈ, ಸಿವಿಲ್ ಇಂಜಿನಿಯರ್ಸ್ ಸಂಘದ ಭಗವಾನದಾಸ್ ಹಾಗೂ ನಿರಂಜನ ಕುಮಾರ್ ಉಪಸ್ಥಿತರಿದ್ದರು.


