ಕೊಪ್ಪಳ/ಕಾಸರಗೋಡು: ಕೊಪ್ಪಳ ಜಿಲ್ಲೆಯ ಖ್ಯಾತ ಜಾನಪದ ಕಲಾವಿದ, ಜಾನಪದ ಸಾಮ್ರಾಟ್ ಹಾಗೂ ಜಾನಪದ ಕಲಾಗುರು ಶ್ರೀ ಶರಣಯ್ಯ ಎನ್. ಇಟಗಿ ಅವರಿಗೆ ಕಾಸರಗೋಡಿನ ಕನ್ನಡ ಭವನ ನೀಡುವ ಪ್ರತಿಷ್ಠಿತ “ಅಂತರ್ ರಾಜ್ಯ ಕನ್ನಡ ಪಯಸ್ವಿನಿ ಜಾನಪದ ರತ್ನ – ಅಚೀವ್‌ಮೆಂಟ್ ಅವಾರ್ಡ್–2026”ಕ್ಕೆ ಆಯ್ಕೆ ಮಾಡಲಾಗಿದೆ.

ಜಾನಪದ ಕಲೆಯ ಉಳಿವು ಮತ್ತು ಬೆಳವಣಿಗೆಗೆ ವಿಶಿಷ್ಟ ಕೊಡುಗೆ ನೀಡಿರುವ ಶರಣಯ್ಯ ಎನ್. ಇಟಗಿ ಅವರು ನೂರಾರು ಜಾನಪದ ತಂಡಗಳನ್ನು ಸಂಘಟಿಸಿ ತರಬೇತಿ ನೀಡಿದ್ದು, ತಮ್ಮ ಕಲಾ ಸಾಧನೆಯ ಮೂಲಕ ರಾಷ್ಟ್ರ ಮಟ್ಟದಲ್ಲೂ ಗುರುತಿಸಿಕೊಂಡಿದ್ದಾರೆ. ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪೆರೇಡ್ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ರಾಜ್ಯಕ್ಕೆ ಕೀರ್ತಿ ತಂದಿರುವುದು ಅವರ ಸಾಧನೆಯ ಮತ್ತೊಂದು ಹೆಗ್ಗಳಿಕೆಯಾಗಿದೆ.
ಜುಲೈ 26ರಂದು ಕಾಸರಗೋಡಿನ ಕನ್ನಡ ಭವನದಲ್ಲಿ ನಡೆಯಲಿರುವ “ರಜತ ಸಂಭ್ರಮ ಸಮಾರೋಪ ಕಾರ್ಯಕ್ರಮ” ಹಾಗೂ “ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ”ದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.
ಈ ಕುರಿತು ಸಮ್ಮೇಳನ ಸಮಿತಿ ಅಧ್ಯಕ್ಷ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಹಾಗೂ ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ. ಕೆ. ವಾಮನ್ ರಾವ್ ಬೇಕಲ್ ಪ್ರಕಟಣೆ ನೀಡಿದ್ದು, ಜಾನಪದ ಕ್ಷೇತ್ರಕ್ಕೆ ಶರಣಯ್ಯ ಎನ್. ಇಟಗಿ ಅವರು ಸಲ್ಲಿಸಿರುವ ಅಮೋಘ ಸೇವೆ ಮತ್ತು ಜೀವಮಾನ ಸಾಧನೆಯನ್ನು ಪರಿಗಣಿಸಿ ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.


