ಮಂಜೇಶ್ವರದಲ್ಲಿ ಮೊದಲ ಬಾರಿಗೆ ‘ಹಲಸು ಹಣ್ಣಿನ ಮೇಳ’ಕ್ಕೆ ಅದ್ಧೂರಿ ಚಾಲನೆ

ಹಲಸಿನ ವೈವಿಧ್ಯಮಯ ತಿನಿಸುಗಳು, ಅಪರೂಪದ ಹಣ್ಣುಗಳು, ಸೀರೆಗಳು ಹಾಗೂ ಕರಕುಶಲ ವಸ್ತುಗಳ ಪ್ರದರ್ಶನ–ಮಾರಾಟ

ಮಂಜೇಶ್ವರ, ಜು. 10: ಸಪ್ತಭಾಷಾ ಸಂಗಮ ಭೂಮಿ ಮಂಜೇಶ್ವರದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗಿರುವ ಮೂರು ದಿನಗಳ **‘ಹಲಸು ಹಣ್ಣಿನ ಮೇಳ’**ಕ್ಕೆ ಶುಕ್ರವಾರ ಮಂಜೇಶ್ವರದ ಮೆಜೆಸ್ಟಿಕ್ ಮ್ಯಾನರ್ (ಕಲಾ ಸ್ಪರ್ಶಂ) ಸಭಾಂಗಣದಲ್ಲಿ ಅದ್ಧೂರಿ ಚಾಲನೆ ದೊರೆಯಿತು.

ಮಂಜೇಶ್ವರ ಗ್ರಾಮ ಪಂಚಾಯತ್‌ನ ನಿಕಟಪೂರ್ವ ಅಧ್ಯಕ್ಷೆ ಜೀನ್ ಲವಿನಾ ಮೊಂತೆರೋ ಮೇಳವನ್ನು ಉದ್ಘಾಟಿಸಿದರು. ಮಾರಾಟ ಮಳಿಗೆಗೆ ವಾರ್ಡ್ ಸದಸ್ಯ ಅಬ್ದುಲ್ಲಾ ಗುಡ್ಡಕ್ಕೇರಿ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳಾದ ರತ್ನಾಕರ, ಜಯಂತಿ, ಎಂ. ಹರೀಶ್ ಭಟ್, ಸಿದ್ದೀಖ್, ರಾಜೇಶ್ ಹಾಗೂ ಆಯೋಜಕರಾದ ರತನ್ ಕುಮಾರ್ ಹೊಸಂಗಡಿ, ಕೀರ್ತನ್ ಕಡಂಬಾರ್, ಸಂದೇಶ್ ಪುತ್ರನ್, ಭಾಸ್ಕರ ಪೂಜಾರಿ, ಪ್ರಕಾಶ್ ಕೀರ್ತೇಶ್ವರ ಉಪಸ್ಥಿತರಿದ್ದರು. ಪತ್ರಕರ್ತರಾದ ನಾರಾಯಣ ಬೆಂಬಲ್ತಿಮಾರ್, ಅಚ್ಚುತ ಚೇವಾರ್, ಪ್ರಕಾಶ್ ಮಂಜೇಶ್ವರ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಮೇಳದಲ್ಲಿ ಹಲಸಿನ ಹಣ್ಣಿನಿಂದ ತಯಾರಿಸಲಾದ ಅಪ್ಪ, ಜಿಲೇಬಿ, ಹೋಳಿಗೆ, ಕಬಾಬ್, ಮಂಚೂರಿ, ಬಿರಿಯಾನಿ ಸೇರಿದಂತೆ ವಿವಿಧ ಬಗೆಯ ತಿನಿಸುಗಳನ್ನು ಸ್ಥಳದಲ್ಲೇ ಸಿದ್ಧಪಡಿಸಿ ಗ್ರಾಹಕರಿಗೆ ಬಡಿಸಲಾಗುತ್ತಿದೆ.

ತುಮಕೂರು ಹಾಗೂ ಪಾಂಡಿಚೇರಿಯ ‘ಚಂದ್ರ ಹಲಸು’ ಸೇರಿದಂತೆ ವಿವಿಧ ತಳಿಯ ಹಲಸಿನ ಹಣ್ಣುಗಳು ಮತ್ತು ಬೆಂಗಳೂರು ಹಾಗೂ ರಾಮನಗರದಿಂದ ತರಲಾದ ಹತ್ತು ಬಗೆಯ ವಿಶೇಷ ಮಾವಿನ ಹಣ್ಣುಗಳು ಮೇಳದ ಪ್ರಮುಖ ಆಕರ್ಷಣೆಯಾಗಿವೆ. ಹಪ್ಪಳ, ಚಿಪ್ಸ್, ಜಾಮ್, ಉಪ್ಪಿನಕಾಯಿ, ಹಲಸಿನ ಐಸ್‌ಕ್ರೀಮ್ ಹಾಗೂ ಅಪ್ಪೆಮಿಡಿ ಚಟ್ನಿ ಸೇರಿದಂತೆ ಹಲವಾರು ಮೌಲ್ಯವರ್ಧಿತ ಉತ್ಪನ್ನಗಳ ಮಾರಾಟವೂ ನಡೆಯುತ್ತಿದೆ.

ಇದರ ಜೊತೆಗೆ, ಇಳಕಲ್ ಹಾಗೂ ಮೈಸೂರು ಸಿಲ್ಕ್ ಸೀರೆಗಳು, ಚನ್ನಪಟ್ಟಣದ ಬೊಂಬೆಗಳು, ಮಣ್ಣಿನ ಆಭರಣಗಳು, ಬೇಲೂರಿನ ಶಿಲಾಮೂರ್ತಿಗಳು, ಆಯುರ್ವೇದ ಉತ್ಪನ್ನಗಳು, ವಿವಿಧ ಹಣ್ಣಿನ ಗಿಡಗಳು, ತರಕಾರಿ ಬೀಜಗಳು ಹಾಗೂ ಹೂವಿನ ಗಿಡಗಳ ಮಳಿಗೆಗಳು ಸಹ ಸಾರ್ವಜನಿಕರ ಗಮನ ಸೆಳೆಯುತ್ತಿವೆ.

ಮೇಳಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ಉಚಿತವಾಗಿ ಹಲಸಿನ ಜಿಲೇಬಿ ನೀಡಲಾಗುತ್ತಿದೆ. ಅಲ್ಲದೆ, ಸೆಲ್ಫಿ ಸ್ಟ್ಯಾಂಡ್‌ನಲ್ಲಿ ಫೋಟೋ ತೆಗೆದು ವಾಟ್ಸಾಪ್ ಸ್ಟೇಟಸ್‌ನಲ್ಲಿ ಹಂಚಿಕೊಳ್ಳುವವರಿಗೆ ಸದ್ಗುರು ಆಯುರ್ವೇದ ಸಾಬೂನು ಉಚಿತವಾಗಿ ನೀಡಲಾಗುತ್ತಿದೆ. ಸಾರ್ವಜನಿಕರು ತಮ್ಮಲ್ಲಿರುವ ಹಳೆಯ ಜರಿ ರೇಷ್ಮೆ ಸೀರೆಗಳನ್ನು ನೀಡಿ ಹಣ ಪಡೆಯುವ ವಿಶೇಷ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

ಜುಲೈ 12ರವರೆಗೆ ನಡೆಯಲಿರುವ ಈ ಮೇಳವು ಪ್ರತಿದಿನ ಬೆಳಿಗ್ಗೆ 10ರಿಂದ ರಾತ್ರಿ 9 ಗಂಟೆಯವರೆಗೆ ಸಾರ್ವಜನಿಕರಿಗೆ ಮುಕ್ತವಾಗಿದ್ದು, ಮಂಜೇಶ್ವರದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಈ ವಿಶಿಷ್ಟ ಮೇಳವನ್ನು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಸದುಪಯೋಗಪಡಿಸಿಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!