ಉಪ್ಪಳ:ಹಲವು ವರ್ಷಗಳಿಂದ ಧ್ವಂಸಗೊಂಡಿರುವ ಜೋಡುಕಲ್ಲು ಮಡಂದೂರು –ದೇರಂಬಳಂ ಸೇತುವೆಯನ್ನು ಪುನರ್‌ನಿರ್ಮಿಸದ ಕಾರಣ ಅಪಘಾತಗಳು ಪದೇಪದೇ ಸಂಭವಿಸುತ್ತಿರುವ ನಡುವೆಯೇ, ಕಾಲ್ಸೇತುವೆ ಮೂಲಕ ತೆರಳುತ್ತಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ನದಿಗೆ ಬಿದ್ದು ಗಾಯಗೊಂಡಿದ್ದಾಳೆ. ಸ್ಥಳೀಯ ನಿವಾಸಿ ಐತ್ತಪ್ಪ ಪೂಜಾರಿಯವರ ಪುತ್ರಿ ನಿಷ್ಮಿತಾ ಅಪಘಾತಕ್ಕೀಡಾದ ವಿದ್ಯಾರ್ಥಿನಿ.

ಸಹೋದರಿ ಸುಷ್ಮಿತಾ ಅವರ ಕೈ ಹಿಡಿದು ಕಾಲ್ಸೇತುವೆ ದಾಟುತ್ತಿದ್ದ ವೇಳೆ ನಿಷ್ಮಿತಾ ನದಿಗೆ ಏಕಾಏಕಿ ಬಿದ್ದಳು. ಇದನ್ನು ಗಮನಿಸಿದ ಸ್ಥಳೀಯ ನಿವಾಸಿ ಉದಯ ಕುಮಾರ್ ನದಿಗೆ ಇಳಿದು ಸಾಹಸಮಯವಾಗಿ ವಿದ್ಯಾರ್ಥಿನಿಯನ್ನು ರಕ್ಷಿಸಿದ್ದಾರೆ . ಗಾಯಗೊಂಡ ನಿಷ್ಮಿತಾಳನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ಸಂಜೆ ಬಸ್‌ನಿಂದ ಇಳಿದು ಮೀಂಜ ಕಡೆಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.


1999–2000ರ ಅವಧಿಯಲ್ಲಿ ಜಿಲ್ಲಾ ಪಂಚಾಯತ್ ಉಪ್ಪಳ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಮಡಂದೂರು–ದೇರಂಬಳಂ ಸೇತುವೆ ಅತಿಯಾದ ಮರಳುಗಾರಿಕೆಯಿಂದ ಕಂಬಗಳು ದುರ್ಬಲಗೊಂಡು ಹಲವು ವರ್ಷಗಳ ಹಿಂದೆ ಕುಸಿದಿತ್ತು. ಸೇತುವೆ ಕುಸಿದ ಪರಿಣಾಮ ರಾಷ್ಟ್ರೀಯ ಹೆದ್ದಾರಿ ಹಾಗೂ ಮಲೆಯೋರ ಹೆದ್ದಾರಿಗೆ ಸುಲಭವಾಗಿ ತಲುಪುವ ಪ್ರಮುಖ ಸಂಪರ್ಕ ಮಾರ್ಗವೇ ಸ್ಥಗಿತಗೊಂಡಿತು.


ಕಾಂಕ್ರೀಟ್ ಪಾದಚಾರಿ ಸೇತುವೆಯಾಗಿದ್ದ ಇದನ್ನು ಕಾಲ್ನಡಿಗೆಯ ಪ್ರಯಾಣಿಕರ ಜೊತೆಗೆ ದ್ವಿಚಕ್ರ ವಾಹನ ಸವಾರರೂ ವ್ಯಾಪಕವಾಗಿ ಬಳಸುತ್ತಿದ್ದರು. ಸೇತುವೆಯ ಎರಡೂ ಬದಿಗಳಲ್ಲಿ ಟಾರ್ ರಸ್ತೆ ನಿರ್ಮಿಸಿದ್ದರಿಂದ ಸ್ಥಳೀಯರು ಮುಖ್ಯವಾಗಿ ಇದೇ ಮಾರ್ಗವನ್ನು ಅವಲಂಬಿಸಿದ್ದರು. ಸುಮಾರು 10 ಕಿಲೋಮೀಟರ್ ವ್ಯಾಪ್ತಿಯ ಜನರು ಬಳಸುತ್ತಿದ್ದ ಈ ಪ್ರಮುಖ ಸೇತುವೆ ಕುಸಿದು ಹಲವು ವರ್ಷಗಳಾದರೂ ಇದುವರೆಗೆ ಪುನರ್‌ನಿರ್ಮಿಸಲು ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಸೇತುವೆ ಕುಸಿದಿರುವುದರಿಂದ ಜನರು ಜೀವವನ್ನು ಪಣಕ್ಕಿಟ್ಟು ಕಾಲ್ಸೇತುವೆಯನ್ನು ಬಳಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಅಪಘಾತವು ಅಧಿಕಾರಿಗಳ ಗಂಭೀರ ನಿರ್ಲಕ್ಷ್ಯದ ಪರಿಣಾಮ ಎಂದು ಸ್ಥಳೀಯರು ಆರೋಪಿಸಿದ್ದಾರೆ.



