ಕಾಸರಗೋಡು: ಕಾಸರಗೋಡು ರೈಲ್ವೆ ನಿಲ್ದಾಣದಿಂದ ಪಾರ್ಸಲ್ ಸೇವೆಯನ್ನು ಸ್ಥಗಿತಗೊಳಿಸುವ ದಕ್ಷಿಣ ರೈಲ್ವೆಯ ನಿರ್ಧಾರವನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಹಾಗೂ ಈ ವಿಷಯವನ್ನು ಖುದ್ದಾಗಿ ಭೇಟಿಯಾಗಿ ಮಂಡಿಸಲಾಗುವುದು ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ. ಎಲ್. ಅಶ್ವಿನಿ ತಿಳಿಸಿದ್ದಾರೆ.

ಕಾಸರಗೋಡು ರೈಲ್ವೆ ನಿಲ್ದಾಣದಲ್ಲಿ ಪಾರ್ಸಲ್ ಸೇವೆಯನ್ನು ಸ್ಥಗಿತಗೊಳಿಸಿದರೆ ಜಿಲ್ಲೆಯ ವಾಣಿಜ್ಯ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬೀಳಲಿದೆ. ಸಣ್ಣ ಮತ್ತು ಮಧ್ಯಮ ಪ್ರಮಾಣದ ವ್ಯಾಪಾರಿಗಳು ಹಾಗೂ ವಿವಿಧ ವಾಣಿಜ್ಯ ಸಂಸ್ಥೆಗಳು ಸರಕು ಸಾಗಣೆಗೆ ರೈಲ್ವೆ ಪಾರ್ಸಲ್ ಸೇವೆಯನ್ನೇ ಅವಲಂಬಿಸಿದ್ದು, ಈ ಸೇವೆ ಇಲ್ಲದಂತಾದರೆ ವ್ಯಾಪಾರ ವಹಿವಾಟು ಹಾಗೂ ಸಾರ್ವಜನಿಕರ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಅಶ್ವಿನಿ ಬೆಟ್ಟು ಮಾಡಿದ್ದಾರೆ.

ಜಿಲ್ಲೆಯ ಅಭಿವೃದ್ಧಿ ಮತ್ತು ವಾಣಿಜ್ಯ ಹಿತಾಸಕ್ತಿಗೆ ನಿರ್ಣಾಯಕವಾಗಿರುವ ಈ ವಿಷಯದಲ್ಲಿ ಬಿಜೆಪಿ ಗಂಭೀರವಾಗಿ ಮಧ್ಯಪ್ರವೇಶಿಸಲಿದ್ದು, ಪಾರ್ಸಲ್ ಸೇವೆ ಮುಂದುವರಿಯುವಂತೆ ಮಾಡಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಎಂ.ಎಲ್. ಅಶ್ವಿನಿ ಸ್ಪಷ್ಟಪಡಿಸಿದ್ದಾರೆ.


