ಪೈವಳಿಕೆ: ರಸ್ತೆ ದುರಸ್ತಿಗೆ ಆಗ್ರಹಿಸಿ ‘ನಮ್ಮ ಊರು ನಮ್ಮ ರೋಡ್’ ಹೋರಾಟ ಸಮಿತಿ ರಚನೆ

ಪೈವಳಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಂಡೋಲಿಯಿಂದ ಕಲ್ಲಗದ್ದೆವರೆಗಿನ ಸುಮಾರು 5 ಕಿಲೋಮೀಟರ್ ಉದ್ದದ ರಸ್ತೆಯ ದುರಸ್ತಿಗೆ ಆಗ್ರಹಿಸಿ ‘ನಮ್ಮ ಊರು ನಮ್ಮ ರೋಡ್’ ಎಂಬ ಹೆಸರಿನಲ್ಲಿ ಹೋರಾಟ ಸಮಿತಿಯನ್ನು ರಚಿಸಲಾಗಿದೆ.
ಆಗಸ್ಟ್ 23ರಂದು ಬಾಯಾರು ಪ್ರದೇಶದ ಗ್ರಾಮಸ್ಥರ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಯಿತು.

ಸುದೆಂಬಳ, ಕಲ್ಲಗದ್ದೆ, ನೀರ್ಚಾಲು ಹಾಗೂ ದಳಿಕುಕ್ಕು ಗ್ರಾಮಗಳ ಸುಮಾರು 2 ಸಾವಿರಕ್ಕೂ ಅಧಿಕ ನಿವಾಸಿಗಳಿಗೆ ಈ ರಸ್ತೆಯೇ ಪ್ರಮುಖ ಸಂಪರ್ಕ ಮಾರ್ಗವಾಗಿದೆ. ಕಳೆದ 2ರಿಂದ 3 ವರ್ಷಗಳಿಂದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ತುರ್ತು ವಾಹನಗಳು ಹಾಗೂ ಶಾಲಾ ವಾಹನಗಳ ಸಂಚಾರಕ್ಕೂ ಅಡಚಣೆ ಉಂಟಾಗುತ್ತಿದೆ ಎಂದು ಸಭೆಯಲ್ಲಿ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.

ರಸ್ತೆ ದುರಸ್ತಿಗಾಗಿ ರಚಿಸಲಾದ ಹೋರಾಟ ಸಮಿತಿಯ ಅಧ್ಯಕ್ಷರಾಗಿ ಗಣೇಶ್ ಕುಲಾಲ್, ಉಪಾಧ್ಯಕ್ಷರಾಗಿ ಮಾಧವ ಪಾಟಾಳಿ ಪೇಲತ್ತಡ್ಕ, ಕಾರ್ಯದರ್ಶಿಯಾಗಿ ಸುಲೈಮಾನ್ ಅವರನ್ನು ಆಯ್ಕೆ ಮಾಡಲಾಗಿದೆ. ಜೊತೆ ಕಾರ್ಯದರ್ಶಿಗಳಾಗಿ ಶಿವಪ್ರಸಾದ್ ಪೇಲತ್ತಡ್ಕ, ಇಬ್ರಾಹಿಂ ಕುಲ್ಯಾರ್ ಹಾಗೂ ಧನಂಜಯ ಚೆನ್ನಯ ಮೂಲ, ಕೋಶಾಧಿಕಾರಿಯಾಗಿ ಮೋಹನ ಹೊಳ್ಳ ಬದಿಯಾರು ಹಾಗೂ ಜೊತೆ ಕೋಶಾಧಿಕಾರಿಯಾಗಿ ಪ್ರಜ್ವಲ್ ದಳಿಕುಕ್ಕು ಅವರನ್ನು ನೇಮಕ ಮಾಡಲಾಗಿದೆ.

ಸಮಿತಿಯ ಸದಸ್ಯರು ಪೈವಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷರನ್ನು ಭೇಟಿ ಮಾಡಿ ರಸ್ತೆ ದುರಸ್ತಿಗೆ ಮನವಿ ಸಲ್ಲಿಸಿದರು. ಈ ವಿಷಯವನ್ನು ಪಂಚಾಯತ್ ಬೋರ್ಡ್ ಸಭೆಯಲ್ಲಿ ಮಂಡಿಸಿ, ಸಂಬಂಧಪಟ್ಟ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಪಂಚಾಯತ್ ಅಧ್ಯಕ್ಷರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹೋರಾಟ ಸಮಿತಿ ಅಧ್ಯಕ್ಷ ಗಣೇಶ್ ಕುಲಾಲ್, ಕಾರ್ಯದರ್ಶಿ ಸುಲೈಮಾನ್ ಹಾಗೂ ವಾರ್ಡ್ ಸದಸ್ಯ ರಾಮ ಏದರ್ ಉಪಸ್ಥಿತರಿದ್ದರು.
30 ದಿನಗಳೊಳಗೆ ರಸ್ತೆ ದುರಸ್ತಿ ಕಾಮಗಾರಿ ಆರಂಭಿಸದಿದ್ದರೆ ಮುಂದಿನ ಹೋರಾಟದ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೋರಾಟ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!