ಕಾಸರಗೋಡು : ಚೆನ್ನೈಯಿಂದ ಮಂಗಳೂರು ಮಾರ್ಗವಾಗಿ ಕೇರಳದ ಕೋಝಿಕ್ಕೋಡಿಗೆ ರೈಲಿನಲ್ಲಿ ಸಾಗಿಸುತ್ತಿದ್ದ ಬರೋಬ್ಬರಿ 19 ಕೆಜಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಈ ಕೃತ್ಯದಲ್ಲಿ ಭಾಗಿಯಾಗಿದ್ದ ಪಶ್ಚಿಮ ಬಂಗಾಳದ ಉತ್ತರ ಪರ್ಗಾನಾಸ್ ನಿವಾಸಿ ಮಿನೋತಿ ಸರ್ದಾರ್ (32) ಎಂಬಾಕೆಯನ್ನು ಬಂಧಿಸಲಾಗಿದೆ.

ರೈಲ್ವೆ ಪೊಲೀಸ್ ಹಾಗೂ ಆರ್.ಪಿ.ಎಫ್ ಜಂಟಿ ಕಾರ್ಯಾಚರಣೆ ನಡೆಸಿ, ಭಾನುವಾರ ಬೆಳಿಗ್ಗೆ ಈ ಯಶಸ್ವಿ ದಾಳಿ ನಡೆಸಿದ್ದಾರೆ. ಆರೋಪಿ ಮಹಿಳೆಯು ರೈಲಿನ ಜನರಲ್ ಬೋಗಿಯಲ್ಲಿ ಗಾಂಜಾವನ್ನು ಅಕ್ರಮವಾಗಿ ಸಾಗಿಸುತ್ತಿದ್ದಳು.

ಆಂಧ್ರಪ್ರದೇಶ ಹಾಗೂ ಒಡಿಶಾ ಗಡಿಯ ಗ್ರಹಾಂಪುರದಿಂದ ಈಕೆಯಿಂದ ಕೇರಳಕ್ಕೆ ನಿಷೇಧಿತ ಗಾಂಜಾ ಸರಬರಾಜಾಗುತ್ತಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ವಿಶೇಷವೆಂದರೆ, ಇದೇ ರೀತಿ ಗಾಂಜಾ ಸಾಗಿಸುತ್ತಿದ್ದ ಪಶ್ಚಿಮ ಬಂಗಾಳದ ಇಬ್ಬರು ಪುರುಷರನ್ನು ವಾರದ ಹಿಂದಷ್ಟೇ ಇದೇ ಮಾರ್ಗದಲ್ಲಿ ಬಂಧಿಸಲಾಗಿತ್ತು.

