ಕಾಸರಗೋಡು : ಜಿಲ್ಲಾಧಿಕಾರಿ ಕಚೇರಿಯ ಹಿರಿಯ ಶ್ರೇಣಿ ಕ್ಲರ್ಕ್ ಆಶಾಲತಾ ಅವರ ಆತ್ಮಹತ್ಯೆಗೆ ವರ್ಗಾವಣೆ ಪ್ರಕ್ರಿಯೆಯಿಂದ ಉಂಟಾದ ಮಾನಸಿಕ ಒತ್ತಡ ಕಾರಣವಲ್ಲ ಎಂದು ಎಡಿಎಂ ನೇತೃತ್ವದ ತನಿಖಾ ವರದಿ ಸ್ಪಷ್ಟಪಡಿಸಿದೆ.

ಈ ವರದಿಯನ್ನು ಜಿಲ್ಲಾಧಿಕಾರಿಯವರು ರಾಜ್ಯ ಕಂದಾಯ ಇಲಾಖೆ ಆಯುಕ್ತರಿಗೆ ಸಲ್ಲಿಸಲಿದ್ದಾರೆ.
ವರ್ಗಾವಣೆ ನೀತಿಯೇ ಈ ದುರಂತಕ್ಕೆ ಕಾರಣವೆಂದು ವಿಧಾನಸಭೆಯಲ್ಲಿ ವಿಪಕ್ಷ ನಾಯಕರು ಮತ್ತು ಸಿಪಿಐಎಂ ತೀವ್ರವಾಗಿ ಆರೋಪಿಸಿ ಪ್ರತಿಭಟನೆ ನಡೆಸಿದ್ದರು.

ಆದರೆ, ಈ ಎಲ್ಲಾ ಆರೋಪಗಳನ್ನು ವರದಿಯು ಸಾರಾಸಗಟಾಗಿ ತಳ್ಳಿಹಾಕಿದೆ. ಮೃತರು ಈ ಹಿಂದೆಯೇ ವೈಯಕ್ತಿಕ ಕಾರಣಗಳಿಂದ ತೀವ್ರ ಮಾನಸಿಕ ಹತಾಶೆಯಲ್ಲಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಎದುರ್ತೋಡು ನಿವಾಸಿ ಆಶಾಲತಾ ಅವರು ಆ. 9ರಂದು ಕರ್ತವ್ಯದ ವೇಳೆ ಐಸ್‌ಕ್ರೀಂಗೆ ಇಲಿ ವಿಷ ಬೆರೆಸಿ ಸೇವಿಸಿ ಸಾವನ್ನಪ್ಪಿದ್ದರು. ರಾಜಕೀಯ ಪ್ರೇರಿತ ವರ್ಗಾವಣೆಯಿಂದಲೇ ಈ ಸಾವು ಸಂಭವಿಸಿದೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿಬಂದಿದ್ದವು.

