ಕಾಸರಗೋಡು: ಜಿಲ್ಲೆಯಲ್ಲಿ ನೀರಿನಲ್ಲಿ ಮುಳುಗಿ ಸಾವುಗಳು ನಿತ್ಯದ ಘಟನೆಯಾಗುತ್ತಿದ್ದು, ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಇತ್ತೀಚೆಗೆ ಮೊಗ್ರಾಲ್ ಪುತ್ತೂರಿನ ಉಜೀರ್‌ಕರ ಹೊಳೆಯಲ್ಲಿ ಈಜಲು ಇಳಿದ ರಾಜಸ್ಥಾನದ ಜೈಪುರ ಮೂಲದ ವಲಸೆ ಕಾರ್ಮಿಕ ಅಲ್ ಫಯಾಸ್ ಖಾನ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಕೇವಲ ಈ ತಿಂಗಳಲ್ಲಿ ಜಿಲ್ಲೆಯಲ್ಲಿ ಇದು ನಾಲ್ಕನೇ ಮುಳುಗು ಸಾವಿನ ಪ್ರಕರಣವಾಗಿದೆ. ಆಗಸ್ಟ್ 12 ರಂದು ನಾಯನ್ಮಾರ್‌ಮೂಲದ ಪ್ಲಸ್ ಒನ್ ವಿದ್ಯಾರ್ಥಿ ಮೊಹಮ್ಮದ್ ಸಾಹಿಲ್ (15), ಉಪ್ಪಳದಲ್ಲಿ ಎಂಟನೇ ತರಗತಿ ವಿದ್ಯಾರ್ಥಿ ಅಬೂಬಕರ್ ಅಸಾನ್ (13) ಹಾಗೂ ಓಣಂ ಆಚರಣೆಯ ವೇಳೆ ಬಾವಿಗೆ ಬಿದ್ದು 15 ವರ್ಷದ ಬಾಲಕನೊಬ್ಬ ಸಾವನ್ನಪ್ಪಿರುವುದು ಜನರ ಕಣ್ಣೀರಿಗೆ ಕಾರಣವಾಗಿದೆ.

ಅನೇಕ ಮಕ್ಕಳು ಪೋಷಕರಿಗೆ ತಿಳಿಯದೆ ಹೊಳೆ, ಬಾವಿ ಮತ್ತು ಜಲಾಶಯಗಳಿಗೆ ಈಜಲು ಇಳಿಯುತ್ತಿದ್ದಾರೆ. ಈಜು ಬಾರದ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಈ ದುರಂತಗಳಿಗೆ ಬಲಿಯಾಗುತ್ತಿದ್ದು, ಮಕ್ಕಳ ಸುರಕ್ಷತೆಯ ಬಗ್ಗೆ ಪೋಷಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕಾದ ತುರ್ತು ಅಗತ್ಯವಿದೆ.

