ಕಾಸರಗೋಡು: ಪೆರ್ಲ ಸಮೀಪದ ಉಕ್ಕಿನಡ್ಕದಲ್ಲಿ ಯುವಕನೊಬ್ಬನನ್ನು ಅಪಹರಿಸಿ, ನಗ್ನ ವೀಡಿಯೋ ಚಿತ್ರೀಕರಿಸಿ 1.02 ಲಕ್ಷ ರೂಪಾಯಿ ಸುಲಿಗೆ ಮಾಡಿದ ಭೀಕರ ಘಟನೆಯ ಆರೋಪಿಗಳ ಸೂಚನೆ ಲಭಿಸಿರುವ ಬಗ್ಗೆ ಮಾಹಿತಿ ಲಭಿಸಿದೆ. ವಿಟ್ಲ ನಿವಾಸಿ ಸುಜಿತ್ ನೀಡಿರುವ ದೂರಿನನ್ವಯ ಐವರ ತಂಡದ ವಿರುದ್ಧ ಪ್ರಕರಣ ದಾಖಲಾಗಿದೆ.

ಆಗಸ್ಟ್ 29ರಂದು ಸುಜಿತ್ ಅವರನ್ನು ಕಾರಿನಲ್ಲಿ ಅಪಹರಿಸಿದ ಆರೋಪಿಗಳು, ಚೆರ್ಕಳದ ಕ್ವಾರ್ಟರ್ಸ್ವೊಂದಕ್ಕೆ ಕರೆದೊಯ್ದು ಬಾಲಕಿಯೊಂದಿಗೆ ನಗ್ನವಾಗಿ ನಿಲ್ಲಿಸಿ ವೀಡಿಯೋ ಚಿತ್ರೀಕರಿಸಿದ್ದರು. ಬಳಿಕ ಪೋಕ್ಸೋ ಕೇಸ್ನಲ್ಲಿ ಸಿಲುಕಿಸುವುದಾಗಿ ಬೆದರಿಸಿ ಹಣ ಲಪಟಾಯಿಸಿದ್ದಾರೆ.
ಘಟನೆ ವಿದ್ಯಾನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದರಿಂದ ಪ್ರಕರಣವನ್ನು ತನಿಖೆಗೆ ಹಸ್ತಾಂತರಿಸಲಾಗಿದೆ. ಪ್ರಮುಖ ಸುಳಿವು ಲಭಿಸಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.


