ಕಾಸರಗೋಡು: ಜಿಲ್ಲಾ ಎಂಎಸ್ಎಫ್ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಯ ಏಕಪಕ್ಷೀಯ ತೀರ್ಮಾನಗಳನ್ನು ಖಂಡಿಸಿ ಕೋಶಾಧಿಕಾರಿ ಸರ್ಫರಾಸ್ ಬಂದ್ಯೋಡ್ ಸೇರಿದಂತೆ ಐವರು ಪ್ರಮುಖ ಪದಾಧಿಕಾರಿಗಳು ರಾಜೀನಾಮೆ ನೀಡಿದ್ದು, ಸಂಘಟನೆಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ.

ಉಪಾಧ್ಯಕ್ಷರಾದ ಜಂಶೀರ್, ಮುರ್ಶಿದ್ ಹಾಗೂ ಕಾರ್ಯದರ್ಶಿಗಳಾದ ಬಿಲಾಲ್, ಅನ್ಸಾರ್ ರಾಜೀನಾಮೆ ನೀಡಿದ ಇತರ ನಾಯಕರು.
ರಾಜ್ಯ ಸಮಿತಿಗೆ ಹಿರಿಯ ನಾಯಕ ಸವಾದ್ ಅಂಗಡಿಮೊಗರು ಅವರ ಹೆಸರನ್ನು ಶಿಫಾರಸು ಮಾಡಲು ಈ ಮೊದಲು ನಿರ್ಧರಿಸಲಾಗಿತ್ತು. ಆದರೆ, ಅದನ್ನು ಬದಿಗೊತ್ತಿ ಜಿಲ್ಲಾಧ್ಯಕ್ಷ ಸೈಫುದ್ದೀನ್ ಹಾಗೂ ಕಾರ್ಯದರ್ಶಿ ಅನ್ಸಾರ್ ಅವರು ಶಾನಿಫ್ ನೆಲ್ಲಿಕಟ್ಟೆ ಅವರ ಹೆಸರನ್ನು ಏಕಪಕ್ಷೀಯವಾಗಿ ಅಂತಿಮಗೊಳಿಸಿರುವುದು ಈ ಅಸಮಾಧಾನಕ್ಕೆ ಮುಖ್ಯ ಕಾರಣ.

ಅಲ್ಲದೆ, ರಾಜ್ಯ ಸಮಿತಿಯ ಪ್ರತಿನಿಧಿಗಳ ಸಂಖ್ಯೆಯನ್ನು ಕಡಿತಗೊಳಿಸಿರುವುದು ಹಾಗೂ ನಾಯಕರ ಸರ್ವಾಧಿಕಾರಿ ಧೋರಣೆಗೆ ಮಂಜೇಶ್ವರ ಮಂಡಲ ಸಮಿತಿ ಸೇರಿದಂತೆ ಇತರ ಘಟಕಗಳಲ್ಲೂ ತೀವ್ರ ವಿರೋಧ ವ್ಯಕ್ತವಾಗಿದೆ.

