ಕಾಸರಗೋಡು: ಮುಳಿಯಾರು ಭಾಗದಲ್ಲಿ ಚಿರತೆ ಆತಂಕ ಮತ್ತೆ ತೀವ್ರಗೊಂಡಿದೆ. ಮಂಗಳವಾರ ರಾತ್ರಿ ಸುಮಾರು 7:30ರ ವೇಳೆಗೆ ತೀಯಡ್ಕ-ಕುಟ್ಯಾನಂ ರಸ್ತೆಯಲ್ಲಿ ಆಸ್ಪತ್ರೆಯಿಂದ ಮನೆಗೆ ಸ್ಕೂಟರ್ನಲ್ಲಿ ಮರಳುತ್ತಿದ್ದ ಶಿವಪ್ರಿಯ ಎಂಬವರ ಮುಂದೆ ಸಾಕುನಾಯಿಯನ್ನು ಬಾಯಲ್ಲಿ ಕಚ್ಚಿಕೊಂಡಿದ್ದ ಚಿರತೆಯೊಂದು ದಿಢೀರ್ ಜಿಗಿದಿದೆ.

ಸಮಯಪ್ರಜ್ಞೆಯಿಂದ ಸ್ಕೂಟರ್ ನಿಲ್ಲಿಸಿದ ಸವಾರ ಅಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.ಇದಾಗಿ ಕೆಲವೇ ಹೊತ್ತಿನಲ್ಲಿ ಕುಂಞಪ್ಪಾರ ಬಳಿಯೂ ವಾಹನ ಸವಾರರು ಚಿರತೆಯೊಂದು ನಾಯಿಯನ್ನು ಎಳೆದೊಯ್ಯುತ್ತಿರುವುದನ್ನು ಕಂಡಿದ್ದಾರೆ.
ಕೆಲವು ತಿಂಗಳ ಅಂತರದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿರುವುದು ಗ್ರಾಮಸ್ಥರಲ್ಲಿ ಭೀತಿ ಹುಟ್ಟಿಸಿದೆ. ವಿಷಯ ತಿಳಿದ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಚಿರತೆ ಸೆರೆಗೆ ಕ್ರಮ ಕೈಗೊಳ್ಳಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.


