ಕಾಸರಗೋಡು: ಕೇರಳದಲ್ಲಿ ಎದುರಾಗಿರುವ ತೀವ್ರ ವಿದ್ಯುತ್ ಕ್ಷಾಮವನ್ನು ಎದುರಿಸಲು ಸಾರ್ವಜನಿಕರು ಸ್ವಯಂಪ್ರೇರಿತವಾಗಿ ವಿದ್ಯುತ್ ಬಳಕೆ ಮಿತಿಗೊಳಿಸಬೇಕು ಎಂದು ಕೆಎಸ್‌ಇಬಿ ಅಧ್ಯಕ್ಷ ಎಂ.ಜಿ. ರಾಜಮಾಣಿಕ್ಯಂ ಮನವಿ ಮಾಡಿದ್ದಾರೆ.

ಅಘೋಷಿತ ವಿದ್ಯುತ್ ಕಡಿತದಿಂದ ಸಾರ್ವಜನಿಕರಿಗೆ ತೊಂದರೆ ಕೊಡುವ ಉದ್ದೇಶ ಸರ್ಕಾರಕ್ಕಾಗಲಿ, ಮಂಡಳಿಗಾಗಲಿ ಇಲ್ಲ. ಆದರೆ, ತೀವ್ರ ಹವಾಮಾನ ವೈಪರೀತ್ಯದಿಂದಾಗಿ ಎಸಿ ಬಳಕೆ ಹೆಚ್ಚಾಗಿದ್ದು, ಪೂರೈಕೆ ಜಾಲದ ಮೇಲೆ ವಿಪರೀತ ಒತ್ತಡ ಬಿದ್ದಿದೆ. ಹೀಗಾಗಿ ರಾತ್ರಿ ಮಲಗುವ ಮುನ್ನ ಕೋಣೆ ತಂಪಾಗಿಸಿ ಎಸಿ ಆಫ್ ಮಾಡುವಂತೆ ಅವರು ವಿನಂತಿಸಿದ್ದಾರೆ.

ಸೆಪ್ಟೆಂಬರ್ 30 ರವರೆಗೆ ಸಾರ್ವಜನಿಕರು ಸಹಕರಿಸಬೇಕಿದ್ದು, ಅಕ್ಟೋಬರ್ 1 ರಿಂದ ದೈನಂದಿನ 500 ಮೆಗಾವಾಟ್ ಹೆಚ್ಚುವರಿ ವಿದ್ಯುತ್ ಹಾಗೂ ಸ್ವಾಪ್ ಒಪ್ಪಂದದ ಪೂರೈಕೆ ಆರಂಭವಾಗಲಿದ್ದು, ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ಉನ್ನತ ಮಟ್ಟದ ಸಭೆಯ ನಂತರ ತಿಳಿಸಿದರು.

