ಕಾಸರಗೋಡು: ಅಘೋಷಿತ ವಿದ್ಯುತ್ ಕಡಿತವನ್ನು ಖಂಡಿಸಿ ಬಿಜೆಪಿ ಕುಂಬಳೆ ಮಂಡಲ ಸಮಿತಿಯ ನೇತೃತ್ವದಲ್ಲಿ ಕುಂಬಳೆ ಕೆಎಸ್‌ಇಬಿ ಕಚೇರಿಗೆ ಪಂಜಿನ ಮೆರವಣಿಗೆ ನಡೆಸಲಾಯಿತು.


ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್. ಅವರು ಮೇಣದಬತ್ತಿ ಬೆಳಗಿಸುವ ಮೂಲಕ ಪ್ರತಿಭಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಅಘೋಷಿತ ವಿದ್ಯುತ್ ಕಡಿತದಿಂದ ಸಾರ್ವಜನಿಕರು ಹಾಗೂ ವ್ಯಾಪಾರಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪ್ರತಿಭಟನಾಕಾರರು ಮುಂದಿಟ್ಟರು. ವಿದ್ಯುತ್ ಪೂರೈಕೆಯಲ್ಲಿ ನಿರಂತರತೆ ಕಾಪಾಡಬೇಕು ಹಾಗೂ ಜನರಿಗೆ ಆಗುತ್ತಿರುವ ತೊಂದರೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಲಾಯಿತು.

ಬಿಜೆಪಿ ರಾಜ್ಯ ಸಮಿತಿ ಸದಸ್ಯ ವಿ. ರವೀಂದ್ರನ್, ಮಂಡಲ ಅಧ್ಯಕ್ಷ ಬಿ. ವಿಕ್ರಮ್ ಪೈ, ಮಂಡಲ ಉಪಾಧ್ಯಕ್ಷ ಸುಧಾಕರ್ ಕಾಮತ್, ಕೋಶಾಧಿಕಾರಿ ರಾಧಾಕೃಷ್ಣ ರೈ, ಒಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಲತಾ ಸೇರಿದಂತೆ ಏರಿಯಾ ಸಮಿತಿ ಅಧ್ಯಕ್ಷರಾದ ಸುಜಿತ್ ರೈ ಹಾಗೂ ಶಿವಪ್ರಸಾದ್ ರೈ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಅಘೋಷಿತ ವಿದ್ಯುತ್ ಕಡಿತಕ್ಕೆ ಶೀಘ್ರ ಕಡಿವಾಣ ಹಾಕದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.


