ಮಂಜೇಶ್ವರ: ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಮನೆಯಿಂದ ಹೊರಬರಲು ಭೀತಿಪಡುವ ವಾತಾವರಣ ನಿರ್ಮಾಣವಾಗಿದೆ.


ಇದೀಗ ಉದ್ಯಾವರ ಬಿ.ಎಸ್. ನಗರದಲ್ಲಿ ಟ್ಯೂಷನ್ ಮುಗಿಸಿ ಮನೆಗೆ ಮರಳುತ್ತಿದ್ದ ಸ್ಥಳೀಯ ನಿವಾಸಿ ಹನೀಫ್ ಎಂಬುವರ ಪುತ್ರಿ, ವಿದ್ಯಾರ್ಥಿನಿ ಹನಾ ಎಂಬಾಕೆಯನ್ನು ಬೀದಿ ನಾಯಿಯೊಂದು ಹಿಂಬಾಲಿಸಿ ದಾಳಿಗೆತ್ನಿಸಿದೆ. ಈ ವೇಳೆ ಭಯದಿಂದ ಕಿರುಚುತ್ತಾ ಓಡಿದ ಆಕೆ ಆಕಸ್ಮಿಕವಾಗಿ ಬಿದ್ದು, ಕಾಲಿಗೆ ಗಂಭೀರ ಗಾಯಗಳಾಗಿವೆ. ಗಾಯಾಳು ವಿದ್ಯಾರ್ಥಿನಿಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯದಂತೆ ಪಂಚಾಯತ್ ಆಡಳಿತವು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದರೂ ಮತ್ತು ದಂಡ ವಿಧಿಸುತ್ತಿದ್ದರೂ, ಕೆಲ ಪರಿಸರವಾಸಿಗಳು ಬಹಿರಂಗವಾಗಿ ತ್ಯಾಜ್ಯ ಉಪೇಕ್ಷಿಸುತ್ತಿದ್ದಾರೆ. ಈ ತ್ಯಾಜ್ಯವೇ ನಾಯಿಗಳು ಗುಂಪುಗೂಡಲು ಮತ್ತು ಜನರ ಮೇಲೆ ಆಕ್ರಮಣ ಮಾಡಲು ಮುಖ್ಯ ಕಾರಣವಾಗಿದೆ. ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದರೂ, ಕೆಲವರು ಮುಖಕ್ಕೆ ಮುಖವಾಡ ಧರಿಸಿ ತ್ಯಾಜ್ಯ ಎಸೆದು ಹೋಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.

ಬೀದಿ ನಾಯಿಗಳ ನಿಯಂತ್ರಣಕ್ಕೆ ಪಂಚಾಯತ್ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು.
ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವವರನ್ನು ಪತ್ತೆ ಹಚ್ಚಲು ವಿಶೇಷ ತನಿಖಾ ತಂಡವನ್ನು ರಚಿಸಬೇಕು.
ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಬೇಕು.
ಸ್ಥಳೀಯಾಡಳಿತವು ತಕ್ಷಣವೇ ಸ್ಪಂದಿಸಿ ಬೀದಿ ನಾಯಿಗಳ ಭೀತಿಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಕೂಡಾ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

