ಆರಿಕ್ಕಾಡಿ ಟೋಲ್‌ಬೂತ್ ಶಾಶ್ವತವಾಗಿ ಮುಚ್ಚಲಿ; ಸಾಮಗ್ರಿ ತೆರವಿಗೆ ಶಾಸಕ ಆಗ್ರಹ

ಕುಂಬಳೆ: ಆರಿಕ್ಕಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಟೋಲ್ ಬೂತ್ ಅನ್ನು ಯಾವುದೇ ಕಾರಣಕ್ಕೂ ಮರುಸ್ಥಾಪಿಸಲು ಅವಕಾಶ ನೀಡುವುದಿಲ್ಲ ಎಂದು ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಹೇಳಿದ್ದಾರೆ.

ಕುಂಬಳೆ ಪ್ರೆಸ್ ಫೋರಂ ಆಯೋಜಿಸಿದ್ದ ‘ಮೀಟ್ ದಿ ಪ್ರೆಸ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೊಡ್ಡ ಜನಾಂದೋಲನದ ಮೂಲಕವೇ ಆರಿಕ್ಕಾಡಿಯ ಟೋಲ್ ಬೂತ್ ಮುಚ್ಚಿಸಲಾಗಿದೆ ಎಂದು ತಿಳಿಸಿದರು.

ಟೋಲ್ ಬೂತ್‌ನಲ್ಲಿರುವ ಸಾಮಗ್ರಿಗಳನ್ನು ಸಂಪೂರ್ಣವಾಗಿ ತೆರವುಗೊಳಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಈಗಾಗಲೇ ಮನವಿ ಮಾಡಲಾಗಿದೆ. ಆದರೆ, ಸಾಮಗ್ರಿಗಳನ್ನು ತೆರವುಗೊಳಿಸುವ ಕಾಮಗಾರಿಗೆ ಗುತ್ತಿಗೆ ನೀಡುವ ಪ್ರಕ್ರಿಯೆ ವಿಳಂಬವಾಗಿರುವುದೇ ಸದ್ಯದ ತಡೆ ಎಂದು ಶಾಸಕ ಅಶ್ರಫ್ ಹೇಳಿದರು.

ಆರಿಕ್ಕಾಡಿಯಲ್ಲಿ ಮತ್ತೆ ಟೋಲ್ ಬೂತ್ ಸ್ಥಾಪಿಸಲು ಪ್ರಯತ್ನ ನಡೆಯುತ್ತಿದೆ ಎಂಬ ಪ್ರಚಾರದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೆಸ್ ಫೋರಂ ಅಧ್ಯಕ್ಷ ಅಬ್ದುಲ್ಲಾ ಕುಂಬಳೆ ವಹಿಸಿದ್ದರು. ಕಾರ್ಯದರ್ಶಿ ಐ. ಮೊಹಮ್ಮದ್ ರಫೀಕ್ ಸ್ವಾಗತಿಸಿದರು. ಲೇಖಕ ಕೆ.ಎಂ. ಅಬ್ಬಾಸ್ ಅವರು ಶಾಸಕ ಎ.ಕೆ.ಎಂ. ಅಶ್ರಫ್ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

ಕಾಸರಗೋಡು ಬ್ಲಾಕ್ ಪಂಚಾಯತ್ ಸ್ಥಾಯಿ ಸಮಿತಿ ಸದಸ್ಯ ಅಶ್ರಫ್ ಕರ್ಳ ಅವರನ್ನು ಶಾಸಕ ಅಶ್ರಫ್ ಸನ್ಮಾನಿಸಿದರು. ಇದೇ ವೇಳೆ ಸಾಮಾಜಿಕ ಮಾಧ್ಯಮ ವೇದಿಕೆಯನ್ನೂ ಶಾಸಕ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಕುಂಬಳೆ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಕೆ. ಆರಿಫ್, ಅಬ್ದುಲ್ ಲತೀಫ್ ಉಳ್ಳುವಾರ್, ಕೆ.ಎಂ.ಎ. ಸತ್ತಾರ್, ರಶೀದ್ ಬಂದ್ಯೋಡ್ , ಅಬ್ದುಲ್ ಲತೀಫ್ ಉಪ್ಪಳ, ಧನರಾಜ್ ಐಲ, ತಾಹಿರ್ ಉಪ್ಪಳ, ಸೈನುದ್ದೀನ್ ಅಡ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!