ಕುಂಬಳೆ : ಇಲ್ಲಿಯ ಪರಿಸರದಲ್ಲಿ ಕಾನೂನುಬಾಹಿರವಾಗಿ ಮಣ್ಣು ಅಗೆದು ಸಾಗಿಸುವ ದಂಧೆ ಎಡಬಿಡದೆ ಸಾಗುತ್ತಿದ್ದು, ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ.

ಬಂದ್ಯೋಡು ಮೀಪ್ರಿ ಎಂಬಲ್ಲಿ ಅಕ್ರಮವಾಗಿ ಮಣ್ಣು ಲೂಟಿ ಮಾಡುತ್ತಿದ್ದ ಜಾಗದ ಮೇಲೆ ಕುಂಬಳೆ ಎಸ್‌ಐ ಹಾಗೂ ಎಎಸ್‌ಐ ನೇತೃತ್ವದ ಪೊಲೀಸ್ ಪಡೆ ದಿಢೀರ್ ದಾಳಿ ನಡೆಸಿದೆ.

ದಾಳಿ ವೇಳೆ ಮಣ್ಣು ಸಾಗಿಸುತ್ತಿದ್ದ ಒಂದು ಟಿಪ್ಪರ್ ಲಾರಿ ಹಾಗೂ ಜೆಸಿಬಿಯನ್ನು ವಶಪಡಿಸಿಕೊಳ್ಳಲಾಗಿದೆ. ಘಟನಾ ಸ್ಥಳದಲ್ಲಿದ್ದ ಜಾರ್ಖಂಡ್ ಮೂಲದ ಸಹಜಾದ್ (21) ಮತ್ತು ಮೊಹಮ್ಮದ್ ಅರ್ಬಾಸ್ (23) ಅವರನ್ನು ವಶಕ್ಕೆ ಪಡೆದು, ವಿಚಾರಣೆ ನಂತರ ನೋಟೀಸ್ ನೀಡಿ ಬಿಡುಗಡೆ ಮಾಡಲಾಗಿದೆ.
ಈ ಅಕ್ರಮ ಗಣಿಗಾರಿಕೆ ಪ್ರಕರಣವನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಭೂವಿಜ್ಞಾನ ಇಲಾಖೆಗೆ ಹಸ್ತಾಂತರಿಸಲು ಪೊಲೀಸರು ತೀರ್ಮಾನಿಸಿದ್ದಾರೆ.

