ಕುಂಬಳೆ : ನಕಲಿ ನಂಬರ್ ಪ್ಲೇಟ್ ಅಳವಡಿಸಿಕೊಂಡು ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಕಾರು ಸಹಿತ ಇಬ್ಬರು ಯುವಕರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.ಕಯ್ಯಾರುವಿನ ಮೂಸಾ ಅಫೂಲ್ (26) ಮತ್ತು ನಿಜಾಮುದ್ದೀನ್ (19) ಬಂಧಿತ ಆರೋಪಿಗಳು.

ಕಯ್ಯಾರುವಿನ ಚೇವಾರ್ ರೆಸೋರ್ಟ್ ಬಳಿ ಗಸ್ತು ತಿರುಗುತ್ತಿದ್ದ ಎಸ್ಐ ಗಣೇಶನ್ ಕೆ.ಪಿ. ನೇತೃತ್ವದ ಪೊಲೀಸ್ ತಂಡವು ಅನುಮಾನಾಸ್ಪದ ಕಾರನ್ನು ತಪಾಸಣೆ ನಡೆಸಿದಾಗ ಈ ಜಾಲ ಬೆಳಕಿಗೆ ಬಂದಿದೆ.ಕಾರಿನ ಅಸಲಿ ನಂಬರ್ ಪ್ಲೇಟನ್ನು ಒಳಗಿಟ್ಟು, ನಕಲಿ ಪ್ಲೇಟ್ ಅಳವಡಿಸಿಕೊಂಡಿರುವುದು ಕಂಡುಬಂದಿದೆ.

ಆರೋಪಿಗಳು ಯಾವುದೇ ಅಕ್ರಮ ಕೃತ್ಯಕ್ಕೆ ಸಂಚು ರೂಪಿಸಿದ್ದರೇ ಎಂಬ ಕೋನದಲ್ಲಿ ತನಿಖೆ ನಡೆಯುತ್ತಿದೆ. ಜೊತೆಗೆ, ಇತ್ತೀಚೆಗೆ ಶಾಂತಿಪಳ್ಳದ ಪೆಟ್ರೋಲ್ ಬಂಕ್ನಲ್ಲಿ ಹಣ ನೀಡದೆ ಪರಾರಿಯಾದ ಪ್ರಕರಣದಲ್ಲೂ ಇವರ ಪಾತ್ರವಿದೆಯೇ ಎಂದು ಪೊಲೀಸರು ಪರಿಶೀಲಿಸುತ್ತಿದ್ದಾರೆ.

