ಕುಂಬಳೆ : ಅನಧಿಕೃತ ಮರಳು ಗಣಿಗಾರಿಕೆ ಮತ್ತು ಸಾಗಣೆ ವಿರುದ್ಧ ಸಮರ ಸಾರಿರುವ ಕುಂಬಳೆ ಪೊಲೀಸರು, ಕಾರ್ಯಾಚರಣೆ ನಡೆಸಿ ಎರಡು ಅಕ್ರಮ ಕಡವುಗಳನ್ನು ಹಾಗೂ ಮೂರು ದೋಣಿಗಳನ್ನು ಜೆಸಿಬಿ ಬಳಸಿ ನಾಶಪಡಿಸಿದ್ದಾರೆ.

ಮೊಗ್ರಾಲ್ ಕೆಕೆ ಪುರದಲ್ಲಿ ಕಂಡ್ಲಾ ಕಾಡುಗಳ ನಡುವೆ ಬಚ್ಚಿಡಲಾಗಿದ್ದ ಎರಡು ದೋಣಿಗಳನ್ನು ಪತ್ತೆಹಚ್ಚಿ, ಕಡವಿನೊಂದಿಗೆ ಧ್ವಂಸಗೊಳಿಸಲಾಯಿತು. ಅದೇ ರೀತಿ, ಶಿರಿಯ ಹೊಳೆಯ ಪಾಚಾಣಿಯಲ್ಲೂ ಸಹ ಒಂದು ದೋಣಿ ಹಾಗೂ ಅಕ್ರಮ ಕಡವನ್ನು ಪೊಲೀಸರು ನೆಲಸಮಗೊಳಿಸಿದ್ದಾರೆ.

ಮರಳು ಅಕ್ರಮ ರವಾನೆಗೆ ವಾಹನಗಳಿಗೆ ಹಾದಿ ಮಾಡಿಕೊಡುವ ಜಾಗದ ಮಾಲೀಕರ ವಿರುದ್ಧವೂ ಕಠಿಣ ಕಾನೂನು ಕ್ರಮ ಕೈಗೊಂಡು ಪ್ರಕರಣ ದಾಖಲಿಸುವುದಾಗಿ ಕುಂಬಳೆ ಪೊಲೀಸರು ಎಚ್ಚರಿಸಿದ್ದಾರೆ.

